Top Newsದೇಶ/ವಿದೇಶರಾಜಕೀಯರಾಜ್ಯಸುದ್ದಿ

ಸ್ಪೀಕರ್ ವಿರುದ್ಧ ತಿರುಗಿಬಿದ್ದ ‘ಇಂಡಿ’ ಕೂಟ; ಓಂ ಬಿರ್ಲಾ ಪದಚ್ಯುತಿಗೆ ಮಾಸ್ಟರ್ ಪ್ಲಾನ್!

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಹುದ್ದೆಯಿಂದ ಪದಚ್ಯುತಗೊಳಿಸಲು ವಿರೋಧ ಪಕ್ಷಗಳು ನಿರ್ಧರಿಸಿದ್ದು, ಈ ಸಂಬಂಧ ಅವಿಶ್ವಾಸ ನಿರ್ಣಯ ಮಂಡಿಸುವ ಪ್ರಕ್ರಿಯೆಗೆ ಚಾಲನೆ ನೀಡಿವೆ. ಈ ಪ್ರಮುಖ ಬೆಳವಣಿಗೆಯ ಕುರಿತು ಬಜೆಟ್ ಅಧಿವೇಶನದ ಎರಡನೇ ಹಂತದ ಮೊದಲ ದಿನವಾದ ಮಾರ್ಚ್ 9 ರಂದು ಸಂಸತ್ತಿನಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಕಾಂಗ್ರೆಸ್ ನೇತೃತ್ವದಲ್ಲಿ ಮಂಡಿಸಲಾದ ಈ ನಿರ್ಣಯಕ್ಕೆ ಇಂಡಿಯಾ ಒಕ್ಕೂಟದ ಸುಮಾರು 118 ಸಂಸದರು ಸಹಿ ಹಾಕುವ ಮೂಲಕ ಸ್ಪೀಕರ್ ವಿರುದ್ಧ ತಮ್ಮ ಅಸಮಾಧಾನವನ್ನು ಬಹಿರಂಗಪಡಿಸಿದ್ದಾರೆ.

ಸ್ಪೀಕರ್ ಓಂ ಬಿರ್ಲಾ ಅವರು ಸಂಸತ್ತಿನ ಕಲಾಪಗಳಲ್ಲಿ ಪಕ್ಷಪಾತಿಯಾಗಿ ವರ್ತಿಸುತ್ತಿದ್ದಾರೆ ಎಂಬುದು ವಿರೋಧ ಪಕ್ಷಗಳ ಮುಖ್ಯ ಆರೋಪವಾಗಿದೆ. ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷದ ಪ್ರಮುಖ ನಾಯಕರಿಗೆ ಮಾತನಾಡಲು ಸರಿಯಾದ ಅವಕಾಶ ನೀಡುತ್ತಿಲ್ಲ ಮತ್ತು ಕಲಾಪದ ವೇಳೆ ಉದ್ದೇಶಪೂರ್ವಕವಾಗಿ ಆಡಳಿತ ಪಕ್ಷಕ್ಕೆ ಅನುಕೂಲಕರ ವಾತಾವರಣ ನಿರ್ಮಿಸಿಕೊಡುತ್ತಿದ್ದಾರೆ ಎಂದು ವಿಪಕ್ಷಗಳು ದೂರಿದ್ದು, ಪ್ರಧಾನಿ ಮೋದಿ ವಿರುದ್ಧ ವಿಪಕ್ಷ ಸಂಸದರು ಪ್ರತಿಭಟಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ಬಗ್ಗೆಯೂ ನಾಯಕರು ಕಿಡಿಕಾರಿದ್ದಾರೆ.

ಅವಿಶ್ವಾಸ ನಿರ್ಣಯದ ಪ್ರಕ್ರಿಯೆ ಇತ್ಯರ್ಥವಾಗುವವರೆಗೂ ಓಂ ಬಿರ್ಲಾ ಅವರು ಕಲಾಪದ ಅಧ್ಯಕ್ಷತೆಯಿಂದ ಹಿಂದೆ ಸರಿಯಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದಿವೆ. ಈ ಹಿನ್ನೆಲೆಯಲ್ಲಿ, ತಮ್ಮ ವಿರುದ್ಧದ ನಿರ್ಣಯದ ಬಗ್ಗೆ ಅಂತಿಮ ತೀರ್ಮಾನವಾಗುವವರೆಗೆ ಲೋಕಸಭೆಯ ಸ್ಪೀಕರ್ ಕುರ್ಚಿಯಲ್ಲಿ ಕುಳಿತುಕೊಳ್ಳದಿರಲು ಓಂ ಬಿರ್ಲಾ ಸ್ವತಃ ನಿರ್ಧರಿಸಿದ್ದಾರೆ ಎಂದು ಲೋಕಸಭಾ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಾಜಿ ಪ್ರಧಾನಿಗಳು ಮತ್ತು ಸಂಸದೀಯ ನಿಯಮಗಳ ಅನ್ವಯ ಈ ನಿರ್ಣಯದ ಮೇಲಿನ ಚರ್ಚೆ ಮತ್ತು ಮತದಾನವು ಸಂಸತ್ತಿನ ಮುಂದಿನ ಹಾದಿಯನ್ನು ನಿರ್ಧರಿಸಲಿದೆ.

Comments (0)

Your email address will not be published. Required fields are marked *

Back to top button