ಮೈಸೂರು : ಮೈಕ್ರೋ ಫೈನಾನ್ಸ್ಗಳ ಕಿರುಕುಳ ತಾಳಲಾರದೆ ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಗ್ರಾಮಗಳಲ್ಲಿ ನೂರಾರು ಕುಟುಂಬಗಳು ಗ್ರಾಮ ತೊರೆದಿದ್ದ ಘಟನೆ ಬೆಳಕಿಗೆ ಬಂದಿತ್ತು. ಈ ಮೈಕ್ರೋ ಫೈನಾನ್ಸ್ ಕಾಟ ಇದೀಗ ಸಿಎಂ ತವರು ಜಿಲ್ಲೆ ಮೈಸೂರಿಗೂ ಕಾಲಿಟ್ಟಿದ್ದು, ಅನೇಕರನ್ನ ಊರು ಬಿಡುವಂತೆ ಮಾಡಿದೆ.
ನಂಜನಗೂಡು ತಾಲೂಕಿನ ಹುಲ್ಲಹಳ್ಳಿ, ರಾಂಪುರ, ಕುರಿಹುಂಡಿ, ಶಿರಮಳ್ಳಿ, ಕಗ್ಗಲೂರು ಹೆಗ್ಗಡಹಳ್ಳಿ, ಮುದ್ದಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಕುಟುಂಬಗಳು ಗ್ರಾಮ ತೊರೆಯುತ್ತಿವೆ. ಇನ್ನು ಇವರ ಮನೆಗಳ ಮುಂಭಾಗದಲ್ಲಿ ನಾಮಫಲಕಗಳನ್ನ ಅಳವಡಿಸಿ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮರ್ಯಾದಿಗೆ ಹೆದರುವ ಜನ ಪಾಪ, ಈ ಮೈಕ್ರೋ ಫೈನಾನ್ಸ್ ಹಾವಳಿಯಿಂದಾಗಿ ಮನನೊಂದು ಜನರು ಗ್ರಾಮ ತೊರೆಯಲು ಮುಂದಾಗುತ್ತಿದ್ದಾರೆ. ಬಲವಂತವಾಗಿ ಸಾಲ ಕೊಟ್ಟು ವಸೂಲಿ ನೆಪದಲ್ಲಿ ಕಿರುಕುಳ ಆರೋಪ ಮಾಡಲಾಗಿದ್ದು, ಕೆಲ ಮನೆಗಳಿಗೆ ಬೀಗ ಹಾಕಿ ಕುಟುಂಬವನ್ನ ಹೊರದಬ್ಬಿರುವ ಘಟನೆ ಸಹ ಸಂಭವಿಸಿದೆ ಎನ್ನಲಾಗಿದೆ.


