ಉತ್ತರ ಪ್ರದೇಶ: ನಿಯಂತ್ರಣ ತಪ್ಪಿ ವಾಹನವೊಂದು ಕಾಲುವೆಗೆ ಉರುಳಿದ ಪರಿಣಾಮ 11 ಮಂದಿ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆದಿದೆ.
ಪೊಲೀಸರ ಮಾಹಿತಿ ಪ್ರಕಾರ ಸಾವನ್ನಪ್ಪಿದವರು ಸಿಹಗಾಂವ್ ಗ್ರಾಮದಿಂದ ಖರ್ಗುಪುರದ ಪೃಥ್ವಿನಾಥ ದೇವಸ್ಥಾನಕ್ಕೆ ಪವಿತ್ರ ನೀರನ್ನು ಅರ್ಪಿಸಲು ಹೋಗುತ್ತಿದ್ದಾಗ ಅವಘಡ ಸಂಭವಿಸಿದೆ. ಎಸ್‌ಯುವಿಯಲ್ಲಿ ಚಾಲಕ ಸೇರಿದಂತೆ 15 ಜನರು ಪ್ರಯಾಣಿಸುತ್ತಿದ್ದು, 11 ಮಂದಿ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಗ್ರಾಮಸ್ಥರು ಮತ್ತು ರಕ್ಷಣಾ ತಂಡಗಳ ಸಹಾಯದಿಂದ, ಮುಳುಗಿದ ವಾಹನದಿಂದ 11 ಶವಗಳನ್ನು ಹೊರತೆಗೆದಿದ್ದು, ಗಂಭೀರ ಸ್ಥಿತಿಯಲ್ಲಿದ್ದ ನಾಲ್ವರು ಪ್ರಯಾಣಿಕರನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇನ್ನು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಘಟನೆಯ ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ 5 ಲಕ್ಷ ರೂ.ಗಳ ಆರ್ಥಿಕ ನೆರವು ಘೋಷಿಸಿದ್ದಾರೆ.
ಟ್ವೀಟ್ ಮೂಲಕ ಸಿಎಂ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದು, ಗೊಂಡಾ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಸಂಭವಿಸಿದ ಜೀವಹಾನಿ ಅತ್ಯಂತ ದುರಂತ ಮತ್ತು ಹೃದಯ ವಿದ್ರಾವಕ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ 5 ಲಕ್ಷ ಆರ್ಥಿಕ ನೆರವು ನೀಡಲು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದ್ರು.


