ಬೆಂಗಳೂರು: ರಾಜಧಾನಿ ದೆಹಲಿಯಲ್ಲಿ ಭೀಕರ ಕಾರು ಸ್ಫೋಟ ಸಂಭವಿಸಿ, 9 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.. ಈ ಭಯಾನಕ ಸ್ಫೋಟದ ಬೆನ್ನಲ್ಲೇ ದೇಶದಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಬೆಂಗಳೂರಿನಲ್ಲೂ ಬಿಗಿ ಭದ್ರತೆ ಕೈಗೊಳ್ಳಲಾದೆ..
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ಏರ್ಪೋರ್ಟ್ಗೆ ಬರುವ & ಹೋಗುವ ವಾಹನಗಳ ಮೇಲೆ ಹದ್ದಿನಕಣ್ಣಿಡಲಾಗಿದೆ. ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರವಹಿಸುವಂತೆ ಖುದ್ದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್, ಶಿವಾಜಿನಗರ, ಕೆ ಆರ್ ಮಾರುಕಟ್ಟೆ ಸೇರಿದಂತೆ ಎಲ್ಲೆಡೆ ಪೊಲೀಸರು ತೀವ್ರ ತಪಾಸಣೆ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ.. ಬೆಂಗಳೂರು ಪೊಲೀಸರ ಜೊತೆ ಮಾತಾನಾಡಿ ರಾಜ್ಯದಲ್ಲೂ ಅಲರ್ಟ್ ಘೋಷಿಸಿದ್ದೇವೆ. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಭದ್ರತೆಯೊಂದಿಗೆ ಇಡೀ ರಾಜ್ಯದಲ್ಲಿ ಭದ್ರತೆ ಬಿಗಿಗೊಳಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಸೇರಿ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಕಟ್ಟೆಚ್ಚರ ವಹಿಸಲು ಸಿಎಂ ಸೂಚಿಸಿದ್ದು, ಗೃಹ ಇಲಾಖೆ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಸಿಎಂ ಸೂಚನೆ ನೀಡಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಕೋರಿರುವ ಸಿದ್ದರಾಮಯ್ಯ, ಗಾಯಾಳುಗಳು ಶೀಘ್ರಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಕೇಂದ್ರ ಸರ್ಕಾರದ ಅಧೀನದ ಕಚೇರಿಗಳ ಭದ್ರತೆಗೆ ಬೆಂಗಳೂರು ಕಮಿಷನರ್ ಸೂಚಿಸಿದ್ದಾರೆ. ಕೂಡಲೇ ಠಾಣಾ ವ್ಯಾಪ್ತಿಯಲ್ಲಿ ಗಸ್ತು ಮಾಡಬೇಕು. ಲಾಡ್ಜ್ ಗಳನ್ನು ತಪಾಸಣೆ ಮಾಡಬೇಕು, ಮಾತ್ರವಲ್ಲದೇ ಅನುಮಾನಸ್ಪದ ವ್ಯಕ್ತಿಗಳು ವಿಚಾರಣೆ ಮಾಡಬೇಕು. ಲಾಡ್ಜ್‌ನಲ್ಲಿ ತಂಗಿರೋ ಹೊರ ರಾಜ್ಯದವರ ವಿಚಾರಣೆ ನಡೆಸುವಂತೆ ಕಮಿಷನರ್ ನಗರದ ಎಲ್ಲಾ ಇನ್ಸ್ಪೆಕ್ಟರ್ಗಳಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.


