ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರ ಮಾತಿಗೆ ಕಾಂಗ್ರೆಸ್ ಬೆಂಬಲಿತರು ಕೆರಳಿ ಕೆಂಡವಾದ ಘಟನೆ ನಡೆದಿದೆ. ನಗರದ ಸವಾಯಿ ಗಂಧರ್ವ ಸಭಾ ಭವನದಲ್ಲಿ ಮಾದಿಗರ ಸಮಾವೇಶ ನಡೆದಿತ್ತು. ಸಮಾವೇಶದಲ್ಲಿ ಗೋವಿಂದ ಕಾರಜೋಳ ಅವರು ಪ್ರಾಸ್ತಾವಿಕವಾಗಿ ಭಾಷಣ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಮಾದಿಗರ ಸಮುದಾಯಕ್ಕೆ ಸಿದ್ದರಾಮಯ್ಯನವರು ಏನು ಕೊಡುಗೆ ನೀಡಿಲ್ಲ ಎಂದು ಹೇಳಿದರು. ಇದಕ್ಕೆ ಕೋಪಗೊಂಡ ಕಾಂಗ್ರೆಸ್ ಬೆಂಬಲಿತರು ಆಕ್ರೋಶ ವ್ಯಕ್ತಪಡಿಸಿದರು. ಮಾತಿನ ಉದ್ದಕ್ಕೂ ಟೇಬಲ್ ಬಡಿಯುತ್ತಲೇ ತಮ್ಮ ಆಕ್ರೋಶ ಹೊರ ಹಾಕಿದರು.

ಇನ್ನೂ ಕೆಲವು ಕಾಂಗ್ರೆಸ್ ನಾಯಕರು ಸಮಾವೇಶದಿಂದ ಹೊರಗಡೆ ನಡೆಯಲು ಮುಂದಾದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶ ಮಾಡಿದ ಕಾರಜೋಳ ಅವರು, ಕಾಂಗ್ರೆಸ್ ಬೆಂಬಲಿತರನ್ನು ಒಳಗಡೆ ಕರೆಯುವ ಪ್ರಯತ್ನ ಮಾಡಿದರು. ಜೊತೆಗೆ ಮಾದಿಗ ಸಮುದಾಯ ಕೆಲವು ಮುಖಂಡರು ಕೂಡಾ ಕಾರಜೋಳ ಮಾತಿನಿಂದ ಬೇಸರವಾಗಿ ಈ ಸಮಾಜವನ್ನು ನಿಮ್ಮಗಷ್ಟೇ ಬರೆದು ಕೊಟ್ಟಿಲ್ಲ ಎಂಬ ಮಾತುಗಳನ್ನು ಹೇಳಿದರು. ಕೂಡಲೇ ಮಧ್ಯ ಪ್ರವೇಶ ಮಾಡಿದ ಮಾಜಿ ಶಾಸಕ ವೀರಭದ್ರಪ್ಪ ಹಾಲರವಿಯವರು ಎಲ್ಲರನ್ನೂ ಮನವೊಲಿಸಲು ಪ್ರಯತ್ನಿಸಿದರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಶಾಸಕರಾದ ಅರವಿಂದ ಬೆಲ್ಲದ್, ಮಹೇಶ್ ಟೆಂಗಿನಕಾಯಿ ಅವರು ಉಪಸ್ಥಿತರಿದ್ದರು. ಇಂತಹ ಸಮಯದಲ್ಲಿಯೇ ಘಟನೆ ನಡೆದಿದ್ದು, ಬಿಜೆಪಿಗರಿಗೆ ಕೊಂಚ ಇರಿಸು ಮುರಿಸು ಉಂಟುಮಾಡಿತು.