ನವದೆಹಲಿ: ಸಂಸತ್ತು ಅಂಗೀಕರಿಸಿ, ರಾಷ್ಟ್ರಪತಿಗಳ ಅಂಕಿತ ಬಿದ್ದಿರುವ ವಕ್ಫ್ (ತಿದ್ದುಪಡಿ) ಮಸೂದೆಯು ಮಂಗಳವಾರದಿಂದ ಕಾನೂನಾಗಿ ಜಾರಿಗೆ ಬಂದಿದೆ ಎಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಅಧಿಸೂಚನೆಯ ಪ್ರಕಾರ, ವಕ್ಫ್ (ತಿದ್ದುಪಡಿ) ಕಾಯ್ದೆ-2025 ಅನ್ನು ಲೋಕಸಭೆ ಮತ್ತು ರಾಜ್ಯಸಭೆ ಕ್ರಮವಾಗಿ ಏಪ್ರಿಲ್ 3 ಮತ್ತು ಏಪ್ರಿಲ್ 4 ರಂದು ಮಧ್ಯರಾತ್ರಿಯವರೆಗೂ ನಡೆದ ಚರ್ಚೆಯ ಬಳಿಕ ಮಸೂದೆಯನ್ನು ಅಂಗೀಕರಿಸಿದ್ದವು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಏಪ್ರಿಲ್ 5ರಂದು ಪ್ರಸ್ತಾವಿತ ಕಾನೂನಿಗೆ ತಮ್ಮ ಒಪ್ಪಿಗೆಯನ್ನೂ ಸೂಚಿಸಿದ್ದರು. ಏಪ್ರಿಲ್ 8ರಿಂದ ಈ ಕಾಯ್ದೆಯ ನಿಬಂಧನೆಗಳು ಜಾರಿಯಾಗಿವೆ ಎಂದು ತಿಳಿಸಿದೆ.
ಬಿಜೆಪಿ ನೇತೃತ್ವದ ಎನ್‌ಡಿಎ ಕೂಟ ಮಸೂದೆಯನ್ನು ಬೆಂಬಲಿಸಿತ್ತು. ವಿರೋಧ ಪಕ್ಷವಾದ ಇಂಡಿಯಾ ಬಣ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಮುಸ್ಲಿಮರು ಮತ್ತು ಸಮುದಾಯದ ಮಹಿಳೆಯರ ಪಾರದರ್ಶಕತೆ ಮತ್ತು ಸಬಲೀಕರಣಕ್ಕೆ ಈ ಕಾನೂನು ಶಕ್ತಿ ತುಂಬಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ಕಾಯ್ದೆಯ ವಿರುದ್ಧ ಮುಸ್ಲಿಂ ಸಂಸ್ಥೆಗಳು ಮತ್ತು ವಿರೋಧ ಪಕ್ಷದ ಸಂಸದರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ವಿರೋಧ ಪಕ್ಷಗಳು ಇದನ್ನು ಸಂವಿಧಾನಬಾಹಿರ ಎಂದು ಟೀಕಿಸಿದ್ದು, ಇದು ಮುಸ್ಲಿಮರ ಹಕ್ಕುಗಳನ್ನು ಕಸಿಯುತ್ತದೆ ಎಂದು ಆರೋಪಿಸಿದೆ.