ರಾಯಚೂರು: ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಕೋರರ ಅಟ್ಟಹಾಸ ಮಿತಿಮೀರಿದ್ದು, ದೇವದುರ್ಗ ಕ್ಷೇತ್ರದ ಶಾಸಕಿ ಕರೆಮ್ಮ ಜಿ. ನಾಯಕ್ ಅವರ ಮನೆಗೇ ನುಗ್ಗಿ ಮರಳು ದಂಧೆಕೋರರು ಬೆದರಿಕೆ ಹಾಕಿದ್ದಾರೆ ಎಂದು ಶಾಸಕಿ ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕರು, ರಾಯಚೂರು ಜಿಲ್ಲಾಧಿಕಾರಿ (DC) ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು (SP) ಭೇಟಿ ಮಾಡಿ ದೂರು ನೀಡಿದ್ದಾರೆ.
ಘಟನೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕಿ ಕರೆಮ್ಮ ನಾಯಕ್, “ದೇವದುರ್ಗ ತಾಲೂಕಿನಲ್ಲಿ ಯಾವುದೇ ಟೆಂಡರ್ ಇಲ್ಲದೆ ದೊಡ್ಡ ಪ್ರಮಾಣದಲ್ಲಿ ಲಾರಿಗಳ ಮೂಲಕ ಅಕ್ರಮ ಮರಳು ಸಾಗಣೆ ನಡೆಯುತ್ತಿದೆ. ಇದನ್ನು ತಡೆಯಲು ಮುಂದಾದಾಗ, ಶ್ರೀನಿವಾಸ ನಾಯಕ್ ನೇತೃತ್ವದ ತಂಡವು ಪೊಲೀಸ್ ಕ್ವಾರ್ಟರ್ಸ್‌ನಲ್ಲಿರುವ ನನ್ನ ನಿವಾಸಕ್ಕೆ ಬಂದು ಬೆದರಿಕೆ ಒಡ್ಡಿದ್ದಾರೆ. ಒಬ್ಬ ಶಾಸಕಿಗೆ ಈ ಮಟ್ಟದ ಸುರಕ್ಷತೆ ಇದ್ದರೆ, ಸಾಮಾನ್ಯ ಜನರ ಪರಿಸ್ಥಿತಿ ಏನು? ಇಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿಗೆ ತಲುಪಿದೆ?” ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ದಂಧೆಕೋರರಾದ ಶ್ರೀನಿವಾಸ ನಾಯಕ್, ರವಿ, ವೀರೇಶ್ ಗೌಡ, ಅಮರೇಶ್ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ. ಅಧಿಕಾರಿಗಳಿಗೂ ಇವರನ್ನು ಕಂಡು ಹೆದರಿಕೆಯಾಗುತ್ತಿದೆ. ತಹಶೀಲ್ದಾರರನ್ನೂ ಬೆದರಿಸುವ ಧೈರ್ಯ ತೋರುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾನು ಶಾಸಕಿಯಾಗಿ ಕೆಲಸ ಮಾಡುವುದಾದರೂ ಹೇಗೆ ಎಂದು ಪ್ರಶ್ನೆ ಮಾಡಿದ್ಧಾರೆ.
ಅಕ್ರಮ ಮರಳು ಸಾಗಣೆಯನ್ನು ತಕ್ಷಣವೇ ನಿಲ್ಲಿಸಬೇಕು. ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಈ ವಿಷಯದ ಬಗ್ಗೆ ಗಂಭೀರವಾಗಿ ಗಮನಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಅಲ್ಲದೆ, ಮುಂಬರುವ ಅಧಿವೇಶನದಲ್ಲಿ ಅಕ್ರಮ ಮರಳು ದಂಧೆಯ ವಿರುದ್ಧ ಧ್ವನಿ ಎತ್ತುತ್ತೇನೆ ಮತ್ತು ಇಂತಹ ಬೆದರಿಕೆಗಳಿಗೆ ತಾವು ಯಾವುದೇ ಕಾರಣಕ್ಕೂ ಹೆದರುವುದಿಲ್ಲ ಎಂದು ದಂಧೆಕೋರರಿಗೆ ಎಚ್ಚರಿಕೆ ನೀಡಿದ್ದಾರೆ.


