ಮೈಸೂರು ಸ್ಯಾಂಡಲ್​ ಸೋಪ್​ ಫ್ಯಾಕ್ಟರಿಯ ಟೆಂಡರ್​ ಅಕ್ರಮಕ್ಕಾಗಿ ಬಹುಕೋಟಿ ಲಂಚ ವಸೂಲಿ ಪ್ರಕರಣ ದೇಶವ್ಯಾಪಿ ಸುದ್ದಿಯಾಗಿದ್ದ ಬೆನ್ನಲ್ಲೇ ಮತ್ತೊಂದು ಸ್ಫೋಟಕ ಆರೋಪ ಹೊರಬಿದ್ದಿದೆ. ಟೆಂಡರ್ ಅಕ್ರಮಕ್ಕಾಗಿ 40 ಲಕ್ಷ ರೂಪಾಯಿ ಲಂಚ ಕೊಡುವ ವೇಳೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದ ಕಂಪನಿಯೊಂದಕ್ಕೆ ಮತ್ತೆ ಬಹುಕೋಟಿ ಟೆಂಡರ್​ ನೀಡಲಾಗಿದೆ. ಟೆಂಡರ್​ ನಿಯಮಗಳನ್ನು ಗಾಳಿಗೆ ತೂರಿ ಈ ಕಂಪನಿಗೆ ಸ್ಯಾಂಡಲ್​ವುಡ್​ ಆಯಿಲ್​ ಮತ್ತು ನೂಡಲ್ಸ್​ ಪೂರೈಕೆಯ ಗುತ್ತಿಗೆ ನೀಡಲಾಗಿದ್ದು, ಭಾರೀ ಕಿಕ್​ಬ್ಯಾಕ್​ನ ಆರೋಪ ಕೇಳಿ ಬಂದಿದೆ.

ಮಾರುಕಟ್ಟೆ ದರಕ್ಕಿಂತ 2ರಷ್ಟು ಹೆಚ್ಚಿನ ದರ ನೀಡಿ ಕಾರ್ಯಾದೇಶ ನೀಡಲಾಗಿದೆ. ಈ ಪ್ರಕರಣದಲ್ಲಿ ಪಿ.ಎನ್. ಕಮಿಟಿಯು ಸೂಕ್ತ ನಿಗಾವಣೆ ಮಾಡಿಲ್ಲ. ಕೆಟಿಪಿಪಿ ಆ್ಯಕ್ಟ್ ಉಲ್ಲಂಘಿಸಿ ಪಕ್ಷಪಾತ ಎಸಗಲಾಗಿದೆ. ಕಳಂಕಿತ ಕರ್ನಾಟಕ ಕೆಮಿಕಲ್ಸ್​ ಮತ್ತು ಕರ್ನಾಟಕ ಅರೋಮ ಕಂಪನಿಗಳಿಗೆ ಅಕ್ರಮವಾಗಿ ಲಾಭ ಮಾಡಿಕೊಡಲಾಗಿದೆ ಎಂದು ಕೆಎಸ್​ಡಿಎಲ್​ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ನೀಡಲಾಗಿದೆ.

ಕೆಎಸ್​ಡಿಎಲ್​ ಅಧಿಕಾರಿಗಳಾದ ಬಿ.ಎನ್​.ಅರವಿಂದ್ ಹಾಗೂ ಸುಂದರಮೂರ್ತಿ ಇವರ ಮೇಲೆ ಲೋಕಾಯುಕ್ತ ತನಿಖೆ ನಡೆಯುತ್ತಿದ್ದು, ಇವರನ್ನೇ ಮಹತ್ವದ ಹುದ್ದೆಗೆ ಕೂರಿಸಲಾಗಿದೆ. ಇವರಿಬ್ಬರ ಮೇಲೆ ಕರ್ನಾಟಕ ಕೆಮಿಕಲ್ಸ್​ ಕಂಪನಿಯಿಂದ ಭಾರೀ ಪ್ರಮಾಣದಲ್ಲಿ ಲಂಚ ಪಡೆದಿರುವ ಆರೋಪ ಹೊರಿಸಲಾಗಿದೆ. ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಕೆಎಸ್​ಡಿಎಲ್​ ಅಧ್ಯಕ್ಷರು ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೂ ದೂರಿನ ಪ್ರತಿಯನ್ನು ಸಲ್ಲಿಸಲಾಗಿದೆ.

​ಇನ್ನು ಮೈಸೂರು ಸ್ಯಾಂಡಲ್​ ಸೋಪ್​ ಫ್ಯಾಕ್ಟರಿಯಲ್ಲಿ ಭ್ರಷ್ಟಾಚಾರ ಮನೆ ಮಾಡಿದ್ದು ಖರೀದಿ, ಉತ್ಪಾದನೆಯಲ್ಲಿ ಗುಣಮಟ್ಟ ಕುಸಿಯುತ್ತಿದೆ. ಕಿಕ್​ಬ್ಯಾಕ್​ ದಂಧೆ ಮನೆ ಮಾಡಿದ್ದು, ಕರ್ನಾಟಕದ ಹೆಮ್ಮೆಯ ಮೈಸೂರು ಸ್ಯಾಂಡಲ್​ ಸೋಪ್ ಕ್ವಾಲಿಟಿ ಮೇಲೆ ಹೊಡೆತ ಬೀಳುತ್ತಿದೆ ಎಂಬ ದೂರುಗಳು ಹೆಚ್ಚುತ್ತಿವೆ. ಫ್ಯಾಕ್ಟರಿಯನ್ನು ವಿಶ್ವದರ್ಜೆಗೆ ಏರಿಸುತ್ತೇನೆ ಸಚಿವ ಎಂ.ಬಿ.ಪಾಟೀಲರು ಕೂಡಲೇ ನಿಗಾ ವಹಿಸಿ ಸರಿ ದಾರಿಗೆ ತರಲೆಂದು ಕಾರ್ಖಾನೆಯ ನೌಕರರು ಒತ್ತಾಯಿಸಿದ್ದಾರೆ.

By Veeresh

Leave a Reply

Your email address will not be published. Required fields are marked *

Verified by MonsterInsights