ದೆಹಲಿ :  ಹಣಕಾಸು ಆಯೋಗ ಸ್ವಾಯತ್ತ ಸಂಸ್ಥೆಯಾಗಿದ್ದರೂ ಒಂದು ರಾಜ್ಯಕ್ಕೆ ಆಗಿರುವ ಅನ್ಯಾಯ, ತಾರತಮ್ಯವನ್ನು ಸರಿಪಡಿಸುವುದು ಕೇಂದ್ರ ಸರ್ಕಾರದ ಕರ್ತವ್ಯ. ಈ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇಲ್ಲವಾದರೆ ಆ ಸರ್ಕಾರ ಯಾಕಿರಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದರು.

ಕೇಂದ್ರ ಸರ್ಕಾರದ ಅನುದಾನ ತಾರತಮ್ಯ ಖಂಡಿಸಿ ದೆಹಲಿಯ ಜಂತರ್ ಮಂತರ್ ಮೈದಾನದಲ್ಲಿ ಕರ್ನಾಟಕ ಸರ್ಕಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಶಿವಕುಮಾರ್ ಅವರು ಬುಧವಾರ ಹೇಳಿದ್ದಿಷ್ಟು.

“ರಾಜ್ಯಕ್ಕೆ ಅನುದಾನ ನೀಡುವ ಅಧಿಕಾರ ಹಣ ಕಾಸು ಆಯೋಗದ ಮುಂದೆ ಇದೆ. ಕೇಂದ್ರ ಸರ್ಕಾರದ ಕೈಯಲ್ಲಿಲ್ಲ ಎಂದು ಶ್ರೀಮತಿ ನಿರ್ಮಲಾ ಸೀತರಾಮನ್ ಅವರು ಹೇಳಿದ್ದಾರೆ. ನಿಮ್ಮ ಬಳಿ ಅಧಿಕಾರವೇ ಇಲ್ಲವಾದರೆ ಸರ್ಕಾರ ಯಾಕಿರಬೇಕು? ರಾಜ್ಯಕ್ಕೆ ಅನ್ಯಾಯವಾಗಿರುವುದನ್ನು ಸರಿಪಡಿಸುವುದು ಕೇಂದ್ರ ಸರ್ಕಾರದ ಕೆಲಸವಲ್ಲವೇ?.

ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಇದೊಂದು ಐತಿಹಾಸಿಕ ದಿನ. ಮನುಷ್ಯ ಹುಟ್ಟಿದ ನಂತರ ಏನಾದರೂ ಸಾಕ್ಷಿಗುಡ್ಡೆ ಬಿಟ್ಟು ಹೋಗಬೇಕು. ಅದರಂತೆ ಈ ಹೋರಾಟ ಮುಂದಿನ ಪೀಳಿಗೆಗೆ ಒಂದು ಸಾಕ್ಷಿಗುಡ್ಡೆಯಾಗಲಿದೆ. ಇಲ್ಲಿ ನಾನು ಹಾಗೂ ಮುಖ್ಯಮಂತ್ರಿ ಮಾತ್ರ ಬಂದು ಕೂತಿಲ್ಲ. ನಮ್ಮ ರಾಜ್ಯದ ಜನತೆ ಆರಿಸಿರುವ 138 ಶಾಸಕರು, ಪರಿಷತ್ ಸದಸ್ಯರು ಇಲ್ಲಿಗೆ ಬಂದು ರಾಜ್ಯದ ಜನರ ಪರವಾಗಿ ಹೋರಾಟ ಮಾಡುತ್ತಿದ್ದೇವೆ. ನಮ್ಮ ಜನರ ಬೆವರು, ತೆರಿಗೆ, ನಮ್ಮ ಹಕ್ಕು. ಕರ್ನಾಟಕಕ್ಕೆ ನ್ಯಾಯ ಸಿಗಬೇಕು, ನಮ್ಮ ಪಾಲಿನ ಹಣ ನಮಗೆ ಸಿಗಬೇಕು ಎಂದು ಈ ಹೋರಾಟ ಮಾಡುತ್ತಿದ್ದೇವೆ. ಜನರ ಋಣ ತೀರಿಸಲು, ಬಡವರಿಗೆ ನ್ಯಾಯ ಒದಗಿಸಲು, ಬರದಲ್ಲಿ ತತ್ತರಿಸಿರುವ ಜನರ ಹಸಿವು ನೀಗಿಸಲು ನಾವಿಲ್ಲಿ ಸೇರಿದ್ದೇವೆ.

ನಮ್ಮ ಬಗ್ಗೆ ಟೀಕೆ ಮಾಡುವ ನೈತಿಕತೆ ಬಿಜೆಪಿ ಸ್ನೇಹಿತರಿಗಿಲ್ಲ:

ನಮ್ಮ ಹೋರಾಟದ ಬಗ್ಗೆ ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇಂತಹ ಟೀಕೆ ಟಿಪ್ಪಣಿಯನ್ನು ನಾವು ಸ್ವಾಗತಿಸುತ್ತೇವೆ. ಟೀಕೆ ಮಾಡುತ್ತಿರುವ ನಮ್ಮ ಬಿಜೆಪಿ ಸ್ನೇಹಿತರಿಗೆ ನಾನು ಕೇಳುವುದಿಷ್ಟೇ. ಜನ ನಿಮ್ಮ 26 ಸಂಸದರನ್ನು ಆರಿಸಿದ್ದಾರೆ. ನೀವು ಒಂದು ದಿನ ರಾಜ್ಯದ ಪರವಾಗಿ ಹೋರಾಟ ಮಾಡಲಿಲ್ಲ. ರಾಜ್ಯದ ಹಿತದ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹಾಕಲಿಲ್ಲ. ಡಬಲ್ ಇಂಜಿನ್ ಸರ್ಕಾರ ಇದ್ದರೂ ಇಂಜಿನ್ ಗಳು ಫೇಲ್ ಆದವು. ಮುಖ್ಯಮಂತ್ರಿಗಳು ನಿಮ್ಮನ್ನು ಕರೆದುಕೊಂಡು ಹೋದರೂ ನೀವು ಸರ್ಕಾರದ ಮುಂದೆ ತುಟಿ ಬಿಚ್ಚಲಿಲ್ಲ. ಹೀಗಾಗಿ ಗಾಂಧಿ ಪ್ರತಿಮೆ ಮುಂದೆ ನಿಂತು ನೀವು ಪ್ರತಿಭಟನೆ ಮಾಡುವ ನೈತಿಕತೆ ನಿಮಗಿಲ್ಲ. ನಾವು ನಮ್ಮ ಜನರ ಬೆವರನ ಹಣ ಕೊಡಿ ಎಂದು ಕೇಳುತ್ತಿದ್ದೇವೆ. ದೇಶದಲ್ಲಿ ಕೇಂದ್ರ ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ಪಾವತಿ ಮಾಡುತ್ತಿರುವ ರಾಜ್ಯ ಕರ್ನಾಟಕ. ಹೀಗಾಗಿ ನಾವು ನಮ್ಮ ಪಾಲನ್ನು ಕೇಳುತ್ತಿದ್ದೇವೆ.

ನಮ್ಮ ರಾಜ್ಯದಲ್ಲಿ ಬರ ಆವರಿಸಿದೆ. ನಮ್ಮ ಕೃಷಿ ಸಚಿವರು, ಕಂದಾಯ ಸಚಿವರು ಕೇಂದ್ರ ಸಚಿವರನ್ನು ಭೇಟಿ ಮಾಡಿ ಬರದ ವಿಚಾರವಾಗಿ ವರದಿ ನೀಡಿದ್ದಾರೆ. ನಮ್ಮ ಮುಖ್ಯಮಂತ್ರಿಗಳು, ಪ್ರಧಾನಮಂತ್ರಿ ಹಾಗೂ ಗೃಹಮಂತ್ರಿಯವರನ್ನು ಭೇಟಿ ಮಾಡಿ ಪರಿಹಾರ ಕೋರಿದ್ದಾರೆ. ಆದರೂ ಇದುವರೆಗೂ ನಯಾ ಪೈಸೆ ಪರಿಹಾರದ ಹಣ ಬಿಡುಗಡೆ ಮಾಡಿಲ್ಲ.

ಕಳೆದ ವರ್ಷದ ಬಜೆಟ್ ಅನುದಾನವೂ ಕೊಡಲಿಲ್ಲ ಯಾಕೆ?:

ಕಳೆದ ವರ್ಷ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇದ್ದಾಗ ಕೇಂದ್ರ ಬಜೆಟ್ ನಲ್ಲಿ ನಿರ್ಮಲಾ ಸೀತರಾಮನ್ ಅವರು ಅನೇಕ ಯೋಜನೆಗಳಿಗೆ ಅನುದಾನ ಘೋಷಣೆ ಮಾಡಿದ್ದರು. ಈ ಘೋಷಣೆಯಾಗಿ ಒಂದು ವರ್ಷವಾದರೂ ಇದುವರೆಗೂ ಒಂದು ರೂಪಾಯಿ ಕೂಡ ಬಿಡುಗಡೆ ಮಾಡಿಲ್ಲ. ಅವರ ಘೋಷಣೆಯಿಂದಾಗಿ ಬೊಮ್ಮಾಯಿ ಅವರು ತಮ್ಮ ಬಜೆಟ್ ನಲ್ಲಿ ಯೋಜನೆಗಳನ್ನು ಘೋಷಿಸಿದ್ದರು. ಕರ್ನಾಟಕ ರಾಜ್ಯದಿಂದ ಪ್ರತಿನಿಧಿಸಿರುವ ನಿರ್ಮಲಾ ಸೀತರಾಮನ್ ಅವರು ಕಳೆದ ಬಜೆಟ್ ನಲ್ಲಿ ಕರ್ನಾಟಕಕ್ಕೆ ಅನುದಾನ ನೀಡಿದ್ದನ್ನು ನಾನು ಇಲ್ಲಿ ಉಲ್ಲೇಖಿಸಲು ಬಯಸುತ್ತೇನೆ. ಬರ ಪ್ರದೇಶಗಳಿಗೆ ನೀರಿನ ವಿಚಾರವಾಗಿ ಅವರು ಮಾತನಾಡಿ ಬರ ಪೀಡಿತ ಕರ್ನಾಟಕದ ಮಧ್ಯ ಭಾಗದ ಪ್ರದೇಶದಲ್ಲಿ ನೀರು ಹರಿಸಲು ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 5300 ಕೋಟಿಯನ್ನು ನೀಡಲಿದೆ. ಆಮೂಲಕ ಸಣ್ಣ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗೆ ಉತ್ತೇಜನ ನೀಡಲಾಗುವುದು ಎಂದು ಹೇಳಿದ್ದರು.

ಈ ಘೋಷಣೆಯನ್ನು ಯಾಕೆ ಜಾರಿಗೊಳಿಸಲಿಲ್ಲ? ಇದು ಸರಳವಾದ ಪ್ರಶ್ನೆ. ರಾಜ್ಯದಿಂದ ಆಯ್ಕೆಯಾಗಿರುವ ನೀವು ಕರ್ನಾಟಕಕ್ಕೆ ನ್ಯಾಯ ಒದಗಿಸಿಲ್ಲ. ದಯಮಾಡಿ ನಮಗೆ ನ್ಯಾಯ ಒದಗಿಸಿ.”

ಬಿಜೆಪಿಯವರು ರಾಜ್ಯಕ್ಕಾಗಿ ಏನು ಮಾಡಿದ್ದಾರೆ:
ಇದಕ್ಕೂ ಮುನ್ನ ಶಿವಕುಮಾರ ಅವರು ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ, “ಬಿಜೆಪಿ ನಾಯಕರು ರಾಜ್ಯಕ್ಕಾಗಿ ಏನು ಮಾಡಿದ್ದಾರೆ ಎಂದು ಗಾಂಧಿ ಪ್ರತಿಮೆ ಮುಂದೆ ಹೋರಾಟ ಮಾಡುತ್ತಿದ್ದಾರೆ? 26 ಸಂಸದರು ಒಂದು ದಿನ ಕೂಡ ಸರ್ಕಾರದ ಮೇಲೆ ಒತ್ತಡ ಹಾಕಿ ರಾಜ್ಯದ ಹಿತ ಕಾಪಾಡಲಿಲ್ಲ. ಹೀಗಿರುವಾಗ ಬಿಜೆಪಿ ನಾಯಕರು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೆ?”

ನರೇಗಾ, ಕಳಸಾ ಬಂಡೂರಿ ವಿಚಾರದಲ್ಲೂ ಅನ್ಯಾಯ:
ಬರಪೀಡಿತ ಪ್ರದೇಶಗಳಲ್ಲಿ ನರೇಗಾ ಯೋಜನೆಯ 100 ಮಾನವಿ ದಿನದ ಕೂಲಿಯನ್ನು 150ಕ್ಕೆ ಹೇಚ್ಚಳ ಮಾಡಬೇಕು. ಕೇಂದ್ರ ಸರ್ಕಾರ ಈ ಕೆಲಸ ಮಾಡಿದೆಯೇ ಇಲ್ಲ. ಕಳಸಾ ಬಂಡೂರಿ ವಿಚಾರದಲ್ಲಿ ಎಲ್ಲ ಅನುಮತಿ ಸಿಕ್ಕಿದೆ ಎಂದು ಸಂಭ್ರಮಾಚರಣೆ ಕೂಡ ಮಾಡಿದರು. ನಾವು ಟೆಂಡರ್ ಕರೆದರೂ ಇದುವರೆಗೂ ಈ ಯೋಜನೆಗೆ ಅನುಮತಿ ನೀಡಿಲ್ಲ ಯಾಕೆ? ಹೀಗೆ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗಿದೆ. ಈ ಹೋರಾಟ ನಮ್ಮ ಸ್ವಂತ ಹಿತಾಸಕ್ತಿಗಾಗಿ ಅಲ್ಲ. ನಮ್ಮ ರಾಜ್ಯದ ಜನರಿಗಾಗಿ. ಈಗ ನಾವು ಎಚ್ಛೆತ್ತುಕೊಳ್ಳದಿದ್ದರೆ ನಮಗೆ ಮುಂದಿನ ಹಣಕಾಸು ಆಯೋಗದಲ್ಲೂ ಅನ್ಯಾಯವಾಗುವ ಸಾಧ್ಯತೆ ಇದೆ. ಹೀಗಾಗಿ ಈ ಹೋರಾಟ ಮಾಡಿ ನಾವು ಕೇಂದ್ರ ಸರ್ಕಾರದ ಗಮನ ಸೆಳೆಯುತ್ತಿದ್ದೇವೆ.”

ನಮ್ಮ ಧ್ವನಿ ಕೇಂದ್ರದ ಕಿವಿಗೆ ಬೀಳಲಿ ಎಂದು ದೆಹಲಿಗೆ ಬಂದು ಹೋರಾಟ:

ಈ ಹೋರಾಟದಿಂದ ಸಮಸ್ಯೆ ಬಗೆಹರಿಯುತ್ತದೆಯೇ ಎಂದು ಕೇಳಿದಾಗ ಅವರು ಉತ್ತರಿಸಿ, “ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲವಾಗಿದೆ. ನಮ್ಮ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಹೇಳಿದ್ದರೂ ಇವರು ಕಿವಿಗೆ ಹಾಕಿಕೊಂಡಿಲ್ಲ. ನಮ್ಮ ಕೂಗು ಕೇಂದ್ರ ಸರ್ಕಾರದ ಕಿವಿಗೆ ಬೀಳಲಿ ಎಂದು ದೆಹಲಿಗೆ ಬಂದು ನಾವು ಧ್ವನಿ ಎತ್ತಿದ್ದೇವೆ” ಎಂದು ತಿಳಿಸಿದರು.

ಜನರ ಬದುಕಿನ ಮೇಲೆ ನಮ್ಮ ರಾಜಕಾರಣ:

ರಾಜ್ಯ ಸರ್ಕಾರದ ಹೋರಾಟ ರಾಜಕೀಯ ಸ್ಟಂಟ್ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ಬಿಜೆಪಿಯವರು ನಮ್ಮ ಹೋರಾಟದ ಬಗ್ಗೆ ಏನಾದರೂ ಹೇಳಲಿ. ನಮ್ಮಲ್ಲಿ ಯಾರೂ ಸಿನಿಮಾ ನಿರ್ದೇಶಕರು, ನಿರ್ಮಾಪಕರು ಇಲ್ಲ. ಅವರ ಪಕ್ಷದಲ್ಲೇ ನಿರ್ದೇಶಕರು, ನಿರ್ಮಾಪಕರು ಇದ್ದಾರೆ. ನಾವು ನೋಡುತ್ತಿದ್ದೇವೆ. ಅವರು ಭಾವನೆ ಮೇಲೆ ದೇಶ ತೆಗೆದುಕೊಂಡು ಹೋದರೆ, ನಾವು ಜನರ ಬದುಕಿನ ಬಗ್ಗೆ ಗಮನ ಹರಿಸುತ್ತಿದ್ದೇವೆ. ನಮ್ಮ ಗ್ಯಾರಂಟಿ ಬಗ್ಗೆ ಮಾತನಾಡುತ್ತಿದ್ದವರು ಬೇರೆ ರಾಜ್ಯಗಳಲ್ಲಿ ಅವರೇ ಗ್ಯಾರಂಟಿ ಘೋಷಣೆ ಮಾಡಿದ್ದು ಯಾಕೆ?” ಎಂದು ಕೇಳಿದರು.

ಗ್ಯಾರಂಟಿ ಯೋಜನೆಯಿಂದ ಹಣ ಖಾಲಿ ಮಾಡಿಕೊಂಡು ದೆಹಲಿಗೆ ಬಂದಿದ್ದಾರೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ನಮ್ಮ ಹಣ ಖಾಲಿಯಾಗಿಲ್ಲ. ಸರ್ಕಾರ ನಡೆಸುವ ಸಾಮರ್ಥ್ಯ ನಮಗಿದೆ. ಕೇಂದ್ರ ಬಿಜೆಪಿ ಸರ್ಕಾರ ನಮ್ಮ ಪಾಲಿನ ಹಣ ನೀಡಲಿ ಸಾಕು” ಎಂದು ತಿಳಿಸಿದರು.

ಬೇರೆ ರಾಜ್ಯಗಳ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ:

ಕೇರಳದ ಪ್ರತಿಭಟನೆ ಬಗ್ಗೆ ಕೇಳಿದಾಗ, “ನಾನು ಬೇರೆ ರಾಜ್ಯಗಳ ವಿಚಾರವಾಗಿ ಮಾತನಾಡುವುದಿಲ್ಲ. ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ನಮ್ಮ ಪಾಲಿನ ಹಣ ನಾವು ಕೇಳುತ್ತಿದ್ದೇವೆ. ಬೇರೆ ರಾಜ್ಯಗಳು ಲಾಭ ಪಡೆಯಲಿ. ನಮಗೆ ಅದರ ಬಗ್ಗೆ ಆಕ್ಷೇಪವಿಲ್ಲ. ಕೇಂದ್ರ ಸರ್ಕಾರ ಗುಜರಾತಿಗೆ ಗಿಫ್ಟ್ ಸಿಟಿ ಯೋಜನೆ ನೀಡಿದೆ. ನಮ್ಮ ರಾಜ್ಯಕ್ಕೂ ಒಂದು ಗಿಫ್ಟ್ ಸಿಟಿ ನೀಡಲಿ. ಎಲ್ಲಾ ರಾಜ್ಯಗಳಿಗೂ ಇಂತಹ ಯೋಜನೆ ನೀಡಲಿ. ಭಾರತ ಒಕ್ಕೂಟ ರಾಷ್ಟ್ರ. ನಮಗೂ ಯೋಜನೆ ನೀಡಿ ಎಂದು ನಾವು ಆಗ್ರಹಿಸುತ್ತಿದ್ದೇವೆ. ನಮಗೆ ಅವಕಾಶ ನೀಡಿದರೆ ನಾವು ಅವರಿಗಿಂತ ಹೆಚ್ಚು ಉತ್ತಮವಾಗಿ ಕೆಲಸ ಮಾಡಿ ತೋರಿಸುತ್ತೇವೆ. ನಮ್ಮ ರಾಜ್ಯದ ತೆರಿಗೆ, ಜನಸಂಖ್ಯೆಗೆ ಅನುಗುಣವಾಗಿ ನಮ್ಮ ಪಾಲಿನ ಅನುದಾನ ನೀಡಲಿ” ಎಂದು ತಿಳಿಸಿದರು.

ಕೇರಳ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೀರಾ ಎಂದು ಕೇಳಿದಾಗ, “ಕೇರಳ ಸರ್ಕಾರ ನಮ್ಮ ಮುಖ್ಯಮಂತ್ರಿಗಳಿಗೆ ಈ ವಿಚಾರವಾಗಿ ಪತ್ರ ಬರೆದಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿದೆ. ಅವರು ನಮ್ಮ ನೆರೆ ರಾಜ್ಯ. ಅವರನ್ನು ನಾವು ಗೌರವಿಸುತ್ತೇವೆ. ಅವರು ದೇಶದ ಆರ್ಥಿಕತೆಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ದೇಶದಲ್ಲಿ ಎಲ್ಲರೂ ಒಂದೇ, ಯಾರಿಗೆಲ್ಲಾ ಅನ್ಯಾಯವಾಗಿದೆ ಅವರು ಧ್ವನಿ ಎತ್ತಲಿ” ಎಂದು ತಿಳಿಸಿದರು.

ಬಿಜೆಪಿಯೇತರ ರಾಜ್ಯಗಳಿಗೆ ಅನ್ಯಾಯ ಮಾಡಲಾಗುತ್ತಿದೆಯೇ ಎಂದು ಕೇಳಿದಾಗ, “ಜಿಜೆಪಿ ಆಡಳಿತ ಇರುವ ರಾಜ್ಯಗಳು, ಬಿಜೆಪಿಯೇತರ ರಾಜ್ಯಗಳು ಎಂದು ವರ್ಗೀಕರಣ ಮಾಡಿ ನಾವು ರಾಜಕೀಯ ಮಾಡುವುದಿಲ್ಲ. ರಾಜಕೀಯ ಶಾಶ್ವತವಲ್ಲ. 2 ಸಂಸದರಿಂದ ಅವರು 300 ಸಂಸದರಾಗಿದ್ದಾರೆ, 400 ಸಂಸದರಿಂದ ನಾವು 51 ಸಂಸದರಿಗೆ ಇಳಿದಿದ್ದೇವೆ. ನಾಳೆ ನಾವು 300ಕ್ಕೂ ಹೆಚ್ಚು ಸಂಸದರಾಗುತ್ತೇವೆ. ಇದು ರಾಜಕೀಯದ ಭಾಗ” ಎಂದು ತಿಳಿಸಿದರು.

ಪ್ರಧಾನಿ ಬಳಿ ಸಮಯ ಕೇಳಿದ್ದೇವೆ:

ಪ್ರಧಾನಮಂತ್ರಿ ಹಾಗೂ ಕೇಂದ್ರ ಸಚಿವರಿಗೆ ಮನವಿ ಮಾಡುತ್ತೀರಾ ಎಂದು ಕೇಳಿದಾಗ, “ಖಂಡಿತವಾಗಿಯೂ ಮಾಡುತ್ತೇವೆ. ನಮ್ಮ ಇಲಾಖೆ ವಿಚಾರವಾಗಿ ಮಾತನಾಡಲು ನಾವು ಪ್ರಧಾನಮಂತ್ರಿಗಳ ಬಳಿ ಸಮಯ ಕೇಳಿದ್ದೇವೆ. ಸಮಯ ನೀಡಬಹುದು” ಎಂದು ವಿಶ್ವಾಸ ವ್ಯಕ್ತಪಡಿಸಿದರು.

By admin

Leave a Reply

Your email address will not be published. Required fields are marked *

Verified by MonsterInsights