
ರಾಜ್ಯ ಬಜೆಟ್ ಮಂಡನೆಯ ಬೆನ್ನಲ್ಲೇ ಕರ್ನಾಟಕ ರಾಜಕೀಯದಲ್ಲಿ ಸಿಎಂ ಕುರ್ಚಿ ಬದಲಾವಣೆಯ ಚರ್ಚೆ ಮತ್ತೆ ಸ್ಫೋಟಕ ರೂಪ ಪಡೆದುಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ತವರಿನಲ್ಲಿ ನೀಡಿರುವ ಹೇಳಿಕೆಯು, ಸಿಎಂ ಸ್ಥಾನದ ಆಕಾಂಕ್ಷಿಯಾಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪರೋಕ್ಷವಾಗಿ ಶಾಕ್ ನೀಡಿದಂತಿದೆ. “ನಾನೇ ಫುಲ್ ಟೈಮ್ ಸಿಎಂ” ಎಂಬ ಧಾಟಿಯಲ್ಲಿ ಮಾತನಾಡಿರುವ ಸಿದ್ದರಾಮಯ್ಯ, ಹೈಕಮಾಂಡ್ ಅವಕಾಶ ನೀಡಿದರೆ ಮುಂದಿನ ಎರಡು ಬಜೆಟ್‌ಗಳನ್ನೂ ನಾನೇ ಮಂಡಿಸುತ್ತೇನೆ ಎಂದು ಹೇಳುವ ಮೂಲಕ ತಮ್ಮ ಸ್ಥಾನ ಭದ್ರವಾಗಿದೆ ಎಂಬ ಸಂದೇಶ ರವಾನಿಸಿದ್ದಾರೆ.
ಈ ಕುರಿತು ಹೈಕಮಾಂಡ್ ಮಂತ್ರ ಜಪಿಸಿರುವ ಸಿದ್ದರಾಮಯ್ಯ, ಯಾರೋ ಏನೋ ಹೇಳುತ್ತಾರೆ ಎಂಬುದು ತಮಗೆ ಮುಖ್ಯವಲ್ಲ, ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ ಮತ್ತು ಅದಕ್ಕೆ ನಾನು ಬದ್ಧ ಎಂದು ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ಮೇಲೆ ತಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳುವ ಮೂಲಕ, ಸದ್ಯಕ್ಕೆ ನಾಯಕತ್ವ ಬದಲಾವಣೆಯ ಯಾವುದೇ ಸೂಚನೆಗಳಿಲ್ಲ ಎಂಬುದನ್ನು ಪರೋಕ್ಷವಾಗಿ ಸಾರಿದ್ದಾರೆ.
ಬಜೆಟ್ ಮೇಲಿನ ಟೀಕೆಗಳಿಗೆ ಉತ್ತರಿಸಿರುವ ಸಿಎಂ, ರಾಜ್ಯದ ಅಭಿವೃದ್ಧಿಗಾಗಿ ಸಾಲ ಮಾಡುವುದನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. “ನಾನು ಯಾವುದೇ ಒಂದು ವರ್ಗದ ಪರವಾಗಿ ಬಜೆಟ್ ಮಂಡಿಸಿಲ್ಲ, ಇಡೀ ರಾಜ್ಯದ ಹಿತದೃಷ್ಟಿಯಿಂದ ಬಜೆಟ್ ರೂಪಿಸಲಾಗಿದೆ” ಎಂದಿದ್ದಾರೆ. ರಾಜ್ಯದ ಆರ್ಥಿಕ ಇತಿಮಿತಿಯ ಒಳಗಡೆಯೇ ಸಾಲ ಮಾಡಲಾಗಿದ್ದು, ಇದರಿಂದ ಜನರಿಗೆ ಯಾವುದೇ ಹೊರೆಯಾಗುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿದ ಸಿಎಂ, ಬಿಜೆಪಿ ನಾಯಕರಿಗೆ ಪ್ರಧಾನಿಗಳು ಮಾಡಿರುವ ಸಾಲದ ಲೆಕ್ಕ ಗೊತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡಬೇಕಾದ ಅನುದಾನದಲ್ಲಿ ಅನ್ಯಾಯ ಮಾಡುತ್ತಿರುವುದರಿಂದಲೇ ರಾಜ್ಯದ ಜನರಿಗೆ ಹೊರೆಯಾಗುತ್ತಿದೆ ಹೊರತು ನಮ್ಮ ಬಜೆಟ್‌ನಿಂದಲ್ಲ ಎಂದು ಕಿಡಿಕಾರಿದ್ದಾರೆ. ಮೋದಿ ಸರ್ಕಾರದ ಸಾಲದ ನೀತಿಯನ್ನು ಪ್ರಶ್ನಿಸುವ ಮೂಲಕ ಬಿಜೆಪಿಯ “ಸಾಲದ ರಾಮಯ್ಯ” ಎಂಬ ಟೀಕೆಗೆ ಸಿದ್ದರಾಮಯ್ಯ ಕಲಬುರಗಿಯಲ್ಲಿ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.




