ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ಅವರು ಶಾಸಕರ ಡಿನ್ನರ್ ಮೀಟಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಇದು ಪಕ್ಷದಲ್ಲಿ ಹೊಸದೇನಲ್ಲ ಮತ್ತು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ,ನಾಯಕತ್ವದ ಬದಲಾವಣೆ ಅಥವಾ ಗೊಂದಲಗಳ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಜಂಟಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ಅವರು ಮಾತನಾಡಿದ ಮೇಲೆ ನಾವು ಅದರ ಬಗ್ಗೆ ಚರ್ಚಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಪ್ರತಿಯೊಂದು ಸಣ್ಣ ವಿದ್ಯಮಾನವೂ ಎಐಸಿಸಿ ಅಧ್ಯಕ್ಷರಿಗೆ ತಿಳಿದಿದೆ ನಾಯಕತ್ವದ ಬಗ್ಗೆ ಹೈಕಮಾಂಡ್ ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂಬ ವಿಶ್ವಾಸ ಇದೆ, ಎಲ್ಲಾ ರಾಜಕೀಯ ಪಕ್ಷಗಳಲ್ಲೂ ನಾಯಕತ್ವದ ಚರ್ಚೆಗಳು ಸಹಜ ಎಂದು ಸಮರ್ಥಿಸಿಕೊಂಡಿದ್ದಾರೆ.ಸಚಿವ ಸಂಪುಟ ಪುನರ್ ರಚನೆಯ ಕುರಿತು ಮಾತನಾಡಿದ ಅಜಯ್ ಸಿಂಗ್, ಬಜೆಟ್ ಅಧಿವೇಶನದ ನಂತರ ಸಂಪುಟ ಪುನರ್ ರಚನೆಯಾಗುವ ನಿರೀಕ್ಷೆಯಿದೆ ತಮಗೂ ಸಚಿವನಾಗುವ ಆಸೆ ಇದೆ ಎಂದು ಬಹಿರಂಗವಾಗಿ ಹೇಳಿಕೊಂಡಿರುವ ಅವರು, ಈಗಾಗಲೇ ಮೂರು ಬಾರಿ ಶಾಸಕನಾಗಿ, ಮುಖ್ಯ ಸಚೇತಕನಾಗಿ ಮತ್ತು ದೆಹಲಿ ಪ್ರತಿನಿಧಿಯಾಗಿ ಕೆಲಸ ಮಾಡಿದ ಅನುಭವ ತಮಗಿದೆ ಹೊಸ ಶಾಸಕರು ಅಥವಾ ಎಂಎಲ್‌ಸಿಗಳು ಸಚಿವ ಸ್ಥಾನ ಆಕಾಂಕ್ಷಿಗಳಾಗುವುದರಲ್ಲಿ ತಪ್ಪಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಚಿವ ಸ್ಥಾನದ ಆಯ್ಕೆಯು ಅಂತಿಮವಾಗಿ ಮುಖ್ಯಮಂತ್ರಿಗಳು ಮತ್ತು ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು , ಎಂಟು ಬಾರಿ ಶಾಸಕರಾದ ದೇಶಪಾಂಡೆ ಅವರಂತಹ ಹಿರಿಯರಿಗೂ ಸಚಿವ ಸ್ಥಾನ ಸಿಕ್ಕಿಲ್ಲ , ಸದ್ಯ ಕೆಕೆಆರ್‌ಡಿಬಿ ಅಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸುತ್ತಿರುವ ಅಜಯ್ ಸಿಂಗ್, ಈ ಬಾರಿಯ ಬಜೆಟ್‌ನಲ್ಲಿ ಮಂಡಳಿ ಅಭಿವೃದ್ಧಿಗೆ 6 ಸಾವಿರ ಕೋಟಿ ರೂಪಾಯಿ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.


