ವಿಶ್ವಸಂಸ್ಥೆ 2007ರ ಸೆ.15 ಅನ್ನು ವಿಶ್ವ ಪ್ರಜಾಪ್ರಭುತ್ವದ ದಿನ ಎಂದು ಘೋಷಿಸಿತ್ತು. ಇದರ ಅಂಗವಾಗಿ ಅನೇಕ ದೇಶಗಳಲ್ಲಿ 15 ರಂದು ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿವೆ. ಆದರೆ ಇದರ ಮೌಲ್ಯವನ್ನು ಹೆಚ್ಚು ಪ್ರಚಾರ ಮಾಡಿ ವಿಶ್ವ ಮಟ್ಟದಲ್ಲಿ ಸಾರುವ ಪ್ರಯತ್ನಕ್ಕೆ ಸರಕಾರ ಈ ಹಿಂದೆಯೇ ಕೈ ಹಾಕಿತ್ತು. ಹೀಗಾಗಿ ಕಳೆದ ವರ್ಷ 2023 ಸೆ.15ರಂದು ರಾಜ್ಯಾದ್ಯಂತ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಕಾರ್ಯಕ್ರಮ ನಡೆಸಲಾಗಿತ್ತು. ಇದರಲ್ಲಿ ಸುಮಾರು 2.3 ಕೋಟಿ ಭಾಗವಹಿಸಿ ಸರಕಾರಕ್ಕೆ ಆಶ್ಚರ್ಯ ಉಂಟು ಮಾಡಿದ್ದರು. ಇದರಿಂದ ಸ್ಫೂರ್ತಿ ಪಡೆದ ಸರಕಾರ ಈ ಬಾರಿ 25 ಲಕ್ಷ ಜನರು ರಾಜ್ಯದುದ್ದಕ್ಕೂ ನಿಂತು ಸಂವಿಧಾನ ಓದುವಂತೆ ಮಾಡುತ್ತಿದೆ. ಹೀಗಾಗಿ ಇದರಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸುಮಾರು 3 ಕೋಟಿ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಇದರಿಂದ ಇಡೀ ವಿಶ್ವ ಕರ್ನಾಕದ ಕಡೆ ನೋಡುವಂತಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಜಿಲ್ಲೆಗಳಲ್ಲಿ ಸಕಲ ರೀತಿಯಲ್ಲಿ ಸಜ್ಜು:
ಭಾನುವಾರ ಬೆಳಗ್ಗೆ 9 ಗಂಟೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಮುಂಭಾಗದಲ್ಲಿ ಸಂವಿಧಾನದ ಪೀಠಿಕೆ ಓದುವ ಮೂಲಕ ಚಾಲನೆ ನೀಡಲಿದ್ದಾರೆ. ಆನಂತರ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲೆಗಳ ಸಮಸ್ತ ಜನರು ಸಂವಿಧಾನ ಪೀಠಿಕೆ ಓದಿ ಮಾನವ ಸರಪಳಿ ನಿರ್ಮಿಸುತ್ತಾರೆ. ಆ ಪ್ರದೇಶದಲ್ಲೇ ಗಿಡ ನೆಡುತ್ತಾರೆ. ಹೀಗಾಗಿ ಪ್ರತಿ ಜಿಲ್ಲೆ ತಾಲೂಕುಗಳಲ್ಲೂ ಕಾರ್ಯಕ್ರಮ ನಡೆಯಲಿದ್ದು, ದಕ್ಷಿಣ ಕನ್ನಡದಲ್ಲಿ ಕೆಲವರು ಸಮುದ್ರದಲ್ಲೇ ನಿಂತು ಮಾನವ ಸರಪಳಿ ರಚಿಸಲಿದ್ದಾರೆ.ಇದೇ ರೀತಿ ವೇಷ, ಭೂಷಣ ಹಾಗೂ ವಿಶೇಷ ಸಂದೇಶ ಸಾರುವ ವಿಭಿನ್ನ ಪ್ರಯತ್ನ ಮಾಡಿದ ಜಿಲ್ಲೆಗೆ ಪ್ರಶಸ್ತಿಯನ್ನೂ ನೀಡಲಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ತಿಳಿಸಿದ್ದಾರೆ.