ಬೆಂಗಳೂರು: ಕಸದ ರಾಶಿಯಲ್ಲಿ ಮನುಷ್ಯನ ತಲೆಬುರುಡೆ, ಕೈ ಮತ್ತು ಕಾಲಿನ ಮೂಳೆಗಳು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಸಮೀಪದ ಗೋವಿಂದಶೆಟ್ಟಿಪಾಳ್ಯದಲ್ಲಿ ಪತ್ತೆಯಾಗಿವೆ.
ಗೌರಿ ಹಬ್ಬದ ದಿನ, ಎಂದಿನಂತೆ ಗೋವಿಂದಶೆಟ್ಟಿಪಾಳ್ಯದ ಜನರು ತಮ್ಮ ಮನೆಯ ಕಸವನ್ನು ಸುರಿಯಲು ಸ್ಥಳೀಯ ಕಸದ ರಾಶಿಗೆ ತೆರಳಿದ್ದರು. ಆದರೆ, ಕಸದ ರಾಶಿಯಲ್ಲಿ ಮನುಷ್ಯನ ಮೂಳೆಗಳು ಕಂಡುಬಂದಾಗ ಎಲ್ಲರೂ ಒಮ್ಮೆಗೆ ಆಘಾತಕ್ಕೊಳಗಾದರು. ತಲೆಬುರುಡೆಯ ಜೊತೆಗೆ ಕೈ ಮತ್ತು ಕಾಲಿನ ಮೂಳೆಗಳು ಪತ್ತೆಯಾಗಿವೆ. ಈ ದೃಶ್ಯವನ್ನು ಕಂಡ ಜನರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಮೂಳೆಗಳನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಈ ಘಟನೆಯಿಂದ ಸ್ಥಳೀಯರಲ್ಲಿ ಹಲವಾರು ಊಹಾಪೋಹಗಳು ಹರಡಿವೆ. ಕೆಲವರು ಈ ಮೂಳೆಗಳನ್ನು ಮಾಟಮಂತ್ರಕ್ಕೆ ಬಳಸಿರಬಹುದೆಂದು ಶಂಕಿಸಿದ್ದಾರೆ. ಗಣೇಶ ದೇವಸ್ಥಾನದ ಸಮೀಪದಲ್ಲಿ ಈ ರೀತಿಯ ಘಟನೆ ಸಂಭವಿಸಿರುವುದು ಜನರ ಭಯವನ್ನು ಇನ್ನಷ್ಟು ಹೆಚ್ಚಿಸಿದೆ.
ವಿಷಯ ತಿಳಿಸಿದು ಸ್ಥಳಕ್ಕೆ ಪರಪ್ಪನ ಅಗ್ರಹಾರ ಪೊಲೀಸರ ಭೇಟಿ ಪರಿಶೀಲಿಸಿದ್ದು, ಬಳಿಕ ವ್ಯಕ್ತಿಯೋರ್ವ ತನ್ನ ಮೆಡಿಕಲ್ ಓದುತ್ತಿರುವ ಮಗಳಿಗಾಗಿ ಈ ಮೂಳೆಗಳನ್ನು ತಂದು ಬಳಿಕ ಬಿಸಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಭಯಗೊಂಡಿದ್ದ ಜನರು ನಿಟ್ಟುಸಿರುಬಿಟ್ಟಿದ್ದಾರೆ.