ನವದೆಹಲಿ: ಉತ್ತರಖಂಡ್ ನ ಶಾಲೆಯೊಂದರಲ್ಲಿ ಅಪಾರ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿವೆ.. ಉತ್ತರಾಖಂಡ್ ದ ಆಲ್ಮೋರಾ ಜಿಲ್ಲೆಯ ದಬಾರಾ ಗ್ರಾಮದ ಶಾಲೆಯಲ್ಲಿ 20 ಕೆಜಿಗೂ ಹೆಚ್ಚು ತೂಕದ 161 ಜಿಲಾಟಿನ್ ಸ್ಫೋಟಕಗಳು ಕಂಡು ಬಂದಿವೆ..
ಇದನ್ನು ಮೊದಲು ಶಾಲೆಯ ಪ್ರಾಂಶುಪಾಲರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.. ಪೊಲೀಸರು ಸುತ್ತಮುತ್ತ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.. ಇತ್ತೀಚೆಗೆ ದೆಹಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣದಲ್ಲಿ ಸುಮಾರು 3,000 ಕೆಜಿ ಸ್ಫೋಟಕಗಳು ಪತ್ತೆಯಾಗಿದ್ದವು. ಇದಾದ ಕೆಲವು ದಿನಗಳ ನಂತರ ಉತ್ತರಾಖಂಡದಲ್ಲಿ ಅಪಾರ ಪ್ರಮಾಣದ ಸ್ಫೋಟಕ ಪತ್ತೆಯಾಗಿದೆ. ಸ್ಥಳದಲ್ಲಿ ಉಧಮ್ ಸಿಂಗ್ ನಗರ ಮತ್ತು ನೈನಿತಾಲ್ ಜಿಲ್ಲೆಯ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದಿಂದ ಪರಿಶೀಲನೆ ನಡೆಸಲಾಗಿದೆ. ಬಾಂಬ್ ನಿಷ್ಕ್ರಿಯ ದಳವು ಸ್ಫೋಟಕಗಳನ್ನು ಸಂಗ್ರಹಿಸಿ, ಅವುಗಳನ್ನು ಮುಚ್ಚಿ ಸುರಕ್ಷಿತ ಸ್ಥಳದಲ್ಲಿ ಇರಿಸಿದೆ.
ಗಿಲಾಟಿನ್ ಕಡ್ಡಿಗಳ ಕೆಲ ಪೊಟ್ಟಣಗಳ್ನು ಶೋಧಿಸಲಾಯಿತು. ಅಲ್ಲಿಂದ 20 ಅಡಿ ದೂರದಲ್ಲಿ ಇನ್ನಷ್ಟು ಸ್ಫೋಟಕಗಳು ಸಿಕ್ಕಿವೆ. ಬಾಂಬ್ ನಿಷ್ಕ್ರಿಯ ದಳವು ಈ ಎಲ್ಲಾ ಸ್ಫೋಟಕಗಳ ಪ್ಯಾಕೆಟ್ಗಳನ್ನು ಪಡೆದು, ಸೀಲ್ ಮಾಡಿ ಸುರಕ್ಷಿತ ಸ್ಥಳವೊಂದರಲ್ಲಿ ಇರಿಸಿದೆ. ದಬರ ಗ್ರಾಮದ ಶಾಲೆಯೊಂದರ ಬಳಿಯ ಪೊದೆಗಳಲ್ಲಿ 161 ಗಿಲಾಟಿನ್ ಸ್ಫೋಟಕ ಕಡ್ಡಿಗಳು ಸಿಕ್ಕಿವೆ. ಬಾಂಬ್ ನಿಷ್ಕ್ರಿಯ ದಳ ತನಿಖೆ ನಡೆಸಿದೆ. ಸಮೀಪದ ಪ್ರದೇಶಗಳಲ್ಲೂ ಸ್ಫೋಟಕಗಳ ಪತ್ತೆಗೆ ಶೋಧ ನಡೆಸಲಾಯಿತು’ ಎಂದು ಎಸ್ಎಸ್ಪಿ ದೇವೇಂದ್ರ ಪಿಂಚಾ ಅವರು ತಿಳಿಸಿದ್ದಾರೆ.
ಗಿಲಾಟಿನ್ ಕಡ್ಡಿಗಳು ಸ್ಫೋಟಕ ವಸ್ತುವಾಗಿವೆ. ಗಣಿಗಳಲ್ಲಿ ಇವುಗಳ ಬಳಕೆ ಸಾಮಾನ್ಯ. ಬೆಟ್ಟಗಳಲ್ಲಿ ಬಂಡೆ ಒಡೆಯಲು ಇದನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ, ಶಾಲೆಗೆ ಈ ಗಿಲಾಟಿನ್ ಸ್ಫೋಟಕಗಳು ಯಾಕೆ ಬಂದವು ಎಂಬುದು ಆಶ್ಚರ್ಯ ಮೂಡಿಸಿದೆ. ಈ ನಿಟ್ಟಿನಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಸ್ಫೋಟಕ ವಸ್ತುಗಳ ಕಾಯ್ದೆ 1908ರ ಸೆಕ್ಷನ್ 4 (ಎ) ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 288ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ನಾಲ್ಕು ತಂಡಗಳನ್ನು ರಚಿಸಲಾಗಿದೆ.


