ಶಿವಮೊಗ್ಗ: ಮನೆಯ ಸ್ನಾನದ ಕೋಣೆಗೆ ಹೋದಾಗ ಅಲ್ಲಿ ಏಕಾಏಕಿ ಬೃಹತ್ ಗಾತ್ರದ ಹೆಬ್ಬಾವೊಂದು ಪ್ರತ್ಯಕ್ಷವಾದರೆ ಹೇಗಿರಬೇಡ? ಇಂತಹದ್ದೊಂದು ಮೈ ನಡುಗಿಸುವ ಘಟನೆ ಶಿವಮೊಗ್ಗ ನಗರದ ಗೋಪಾಳದ ತುಳಸಿ ಬಡಾವಣೆಯಲ್ಲಿ ನಡೆದಿದೆ.
ತುಳಸಿ ಬಡಾವಣೆಯ ನಿವಾಸಿ ವಿನಯ್ ಎಂಬುವರ ಮನೆಯಲ್ಲಿ ಕಳೆದ ರಾತ್ರಿ ಈ ಘಟನೆ ಸಂಭವಿಸಿದ್ದು, ರಾತ್ರಿ ವೇಳೆ ಆಹಾರ ಅರಸಿ ಬಂದಿದ್ದ ಹೆಬ್ಬಾವು ಯಾರಿಗೂ ತಿಳಿಯದಂತೆ ಮನೆಯೊಳಗೆ ನುಸುಳಿ, ನೇರವಾಗಿ ಬಾತ್‌ರೂಂ ಸೇರಿಕೊಂಡಿತ್ತು. ಮನೆಯವರು ಬಾತ್‌ರೂಂಗೆ ಹೋದಾಗ ಅಲ್ಲಿ ಬೃಹತ್ ಹೆಬ್ಬಾವು ಸುರುಳಿ ಸುತ್ತಿ ಕುಂತಿರುವುದನ್ನು ಕಂಡು ಕಿರುಚಾಡಿದ್ದಾರೆ. ಇದರಿಂದ ಇಡೀ ಕುಟುಂಬವೇ ಭಯಭೀತರಾಗಿ ಮನೆಯಿಂದ ಹೊರಬಂದಿದ್ದಾರೆ.
ಮನೆಯವರು ಖ್ಯಾತ ಉರಗ ತಜ್ಞ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ನೇಕ್ ಕಿರಣ್, ಬಾತ್‌ರೂಂನ ಕಿರಿದಾದ ಜಾಗದಲ್ಲಿ ಅವಿತು ಕುಳಿತಿದ್ದ ಸುಮಾರು 6-8 ಅಡಿ ಉದ್ದದ ಹೆಬ್ಬಾವನ್ನು ಅತ್ಯಂತ ಚಾಣಾಕ್ಷತನದಿಂದ ಹಿಡಿದು ರಕ್ಷಣೆ ಮಾಡಿದ್ದಾರೆ.
ಮಳೆಗಾಲ ಮತ್ತು ಚಳಿಗಾಲದ ಸಮಯದಲ್ಲಿ ಹಾವುಗಳು ಬೆಚ್ಚನೆಯ ಆಶ್ರಯ ಅರಸಿ ಮನೆಯೊಳಗೆ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಸಾರ್ವಜನಿಕರು ಬಾಗಿಲುಗಳನ್ನು ಸರಿಯಾಗಿ ಮುಚ್ಚಬೇಕು ಮತ್ತು ಮನೆಯ ಸುತ್ತಮುತ್ತ ಪೊದೆಗಳು ಬೆಳೆಯದಂತೆ ಜಾಗ್ರತೆ ವಹಿಸಬೇಕು ಎಂದು ಸ್ನೇಕ್ ಕಿರಣ್ ಹೇಳಿದ್ದಾರೆ.


