ಜಿಲ್ಲೆಸುದ್ದಿ

ಸಾಂಬಾರ್ ಗಲಾಟೆಗೆ ಗೃಹಿಣಿ ಬಲಿ; 4 ವರ್ಷದ ಕಂದಮ್ಮ ಅನಾಥ..!

ಬೆಂಗಳೂರು: ಕೇವಲ ಸಾಂಬಾರ್ ವಿಚಾರವಾಗಿ ಶುರುವಾದ ಸಣ್ಣ ಜಗಳವೊಂದು ಅಂತಿಮವಾಗಿ 27 ವರ್ಷದ ಗೃಹಿಣಿಯೊಬ್ಬರ ಬಲಿ ಪಡೆದಿದ್ದು, ನಾಲ್ಕು ವರ್ಷದ ಪುಟ್ಟ ಕಂದಮ್ಮ ತಾಯಿಯಿಲ್ಲದೆ ಅನಾಥವಾಗಿದೆ. ಮದುವೆಯಾಗಿ ಐದು ವರ್ಷಗಳ ಕಾಲ ಅನ್ಯೋನ್ಯವಾಗಿದ್ದ ಸಂಸಾರದಲ್ಲಿ, ಮೂರು ದಿನದ ಹಳೆಯ ತಂಗಳು ಸಾಂಬಾರ್ ವಿಷಯಕ್ಕೆ ನಡೆದ ಕಿತ್ತಾಟ ಇಂತಹ ದುರಂತಕ್ಕೆ ಕಾರಣವಾಗಿದೆ.

ಮೃತ ಕಾವ್ಯಾ (27) ಮತ್ತು ಪತಿ ರಂಗಸ್ವಾಮಿ ನಡುವೆ ತಂಗಳು ಸಾಂಬಾರ್ ವಿಷಯವಾಗಿ ಮಾತಿಗೆ ಮಾತು ಬೆಳೆದಿದೆ. ಈ ಕ್ಷುಲ್ಲಕ ಕಾರಣಕ್ಕೆ ರಂಗಸ್ವಾಮಿ ತನ್ನ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಆಕೆಯ ಮೇಲೆ ಹಲ್ಲೆಗೂ ಮುಂದಾಗಿದ್ದಾನೆ ಎನ್ನಲಾಗಿದೆ. ಪತಿಯ ನಿರಂತರ ನಿಂದನೆ ಮತ್ತು ಹಲ್ಲೆಯ ಯತ್ನದಿಂದ ಮನನೊಂದ ಕಾವ್ಯಾ, ಮನೆಯಲ್ಲಿದ್ದ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಐದು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿಯ ಬದುಕಿನಲ್ಲಿ ಒಂದು ಸಣ್ಣ ಕಿರಿಕಿರಿ ಇಡೀ ಕುಟುಂಬವನ್ನೇ ಬೀದಿಗೆ ತಂದಿದೆ. ಕಾವ್ಯಾ ಸಾವಿನ ನಂತರ ಆಕೆಯ ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ಪತಿ ರಂಗಸ್ವಾಮಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Comments (0)

Your email address will not be published. Required fields are marked *

Back to top button