
ಕಾಸರಗೋಡು: ಲೆಕ್ಕಾಚಾರಗಳು ತಲೆಕೆಳಗಾಗುವ ಲಕ್ಷಣಗಳು ಕಾಣಿಸುತ್ತಿವೆ. ಯುಡಿಎಫ್ (UDF) ಕೋಟೆಯಲ್ಲಿ ಬಿರುಕು ಮೂಡಿಸಲು ಸಜ್ಜಾಗಿರುವ ‘ಜನಕೀಯ ಮುನ್ನಾ’ (ಜನಕೀಯ ಫ್ರಂಟ್), ಮುಸ್ಲಿಂ ಲೀಗ್ ಅಭ್ಯರ್ಥಿ ಎ.ಕೆ.ಎಂ. ಅಶ್ರಫ್ ವಿರುದ್ಧ ಪ್ರಬಲ ಸ್ವತಂತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದೆ.
ಈ ಮಹತ್ವದ ಬೆಳವಣಿಗೆಯ ಭಾಗವಾಗಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಾನವಾಸ್ ಪಾದೂರ್ ಅವರೊಂದಿಗೆ ಜನಕೀಯ ಫ್ರಂಟ್ ನಾಯಕರು ಸುದೀರ್ಘ ಚರ್ಚೆ ನಡೆಸಿದ್ದಾರೆ.
ನೂರಾರು ಜನರ ಸಮ್ಮುಖದಲ್ಲಿ ರಣತಂತ್ರ
ಕ್ಷೇತ್ರದಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಮಹಿಳೆಯರು ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಬೆಂಬಲಿಗರು ಭಾಗವಹಿಸಿದ್ದರು. “ಬಿಜೆಪಿಯ ಭಯವನ್ನು ತೋರಿಸಿ ಮುಸ್ಲಿಂ ಲೀಗ್ ಜನರನ್ನು ದಾರಿ ತಪ್ಪಿಸುತ್ತಿದೆ,” ಎಂಬ ಗಂಭೀರ ಆರೋಪ ಸಭೆಯಲ್ಲಿ ಕೇಳಿಬಂದಿದೆ. ಲೀಗ್ನ ಸಾಂಪ್ರದಾಯಿಕ ಮತಬ್ಯಾಂಕ್ಗೆ ಲಗ್ಗೆ ಹಾಕಲು ಜನಕೀಯ ಫ್ರಂಟ್ ಈಗ ಶಾನವಾಸ್ ಪಾದೂರ್ ಅವರನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಮುಂದಾಗಿದೆ.
ಎಲ್ಡಿಎಫ್ ಪ್ಲಾನ್ ಬಿ: ಕೆ.ಆರ್. ಜಯಾನಂದ ಎಂಟ್ರಿ
ಇನ್ನೊಂದೆಡೆ, ಎಲ್ಡಿಎಫ್ (LDF) ಅಭ್ಯರ್ಥಿಯಾಗಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕೆ.ಆರ್. ಜಯಾನಂದ ಕಣಕ್ಕಿಳಿಯುತ್ತಿರುವುದು ಕುತೂಹಲ ಮೂಡಿಸಿದೆ. ಆರಂಭದಲ್ಲಿ ಶಾನವಾಸ್ ಪಾದೂರ್ ಅವರನ್ನೇ ಎಲ್ಡಿಎಫ್ ಬೆಂಬಲಿತ ಅಭ್ಯರ್ಥಿಯನ್ನಾಗಿ ಮಾಡುವ ಚರ್ಚೆ ನಡೆದಿತ್ತು. ಆದರೆ, ಶಾನವಾಸ್ ಅವರನ್ನು ಕಣಕ್ಕಿಳಿಸಿದರೆ ಮತಗಳು ವಿಭಜನೆಯಾಗಿ ಬಿಜೆಪಿಗೆ ಪರೋಕ್ಷವಾಗಿ ಲಾಭವಾಗಬಹುದು ಎಂಬ ಆತಂಕ ಜಿಲ್ಲಾ ಸಮಿತಿಯನ್ನು ಕಾಡಿತ್ತು. ಈ ಕಾರಣದಿಂದಾಗಿ ಅಂತಿಮ ಕ್ಷಣದಲ್ಲಿ ಕೆ.ಆರ್. ಜಯಾನಂದ ಅವರ ಹೆಸರನ್ನು ಫೈನಲ್ ಮಾಡಲಾಗಿದೆ ಎನ್ನಲಾಗಿದೆ.
ಜನಕೀಯ ಫ್ರಂಟ್ನ ಈ ನಡೆ ಮಂಜೇಶ್ವರದ ಚುನಾವಣಾ ಫಲಿತಾಂಶದ ಮೇಲೆ ಬೀರಲಿರುವ ಪರಿಣಾಮವೇನು? ಶಾನವಾಸ್ ಪಾದೂರ್ ಅವರು ಅಂತಿಮವಾಗಿ ಅಖಾಡಕ್ಕಿಳಿಯುತ್ತಾರೆಯೇ? ಕಾದು ನೋಡಬೇಕಿದೆ.




