ಜಿಲ್ಲೆಸುದ್ದಿ

ಯಾದಗಿರಿಯಲ್ಲಿ ಭೀಕರ ಹತ್ಯೆ; ವೃದ್ಧನ ತಲೆ ಜಜ್ಜಿ ಕೊಲೆ!

ಯಾದಗಿರಿ: ವಡಗೇರ ತಾಲೂಕಿನ ಗೋನಾಳ ಗ್ರಾಮದಲ್ಲಿ 76 ವರ್ಷದ ವೃದ್ಧ ಹಂಪಣ್ಣ ಸಜ್ಜನ ಎಂಬುವವರನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಮೃತ ಹಂಪಣ್ಣ ಅವರು ಕಳೆದ 12 ವರ್ಷಗಳಿಂದ ತಮ್ಮ ಪತ್ನಿಯ ನಿಧನದ ನಂತರ, ಮಕ್ಕಳು ಗ್ರಾಮದಲ್ಲಿದ್ದರೂ ಸಹ ಜಮೀನಿನಲ್ಲಿ ಪುಟ್ಟ ಮನೆ ನಿರ್ಮಿಸಿಕೊಂಡು ಒಬ್ಬಂಟಿಯಾಗಿ ವಾಸಿಸುತ್ತಿದ್ದರು. 15 ವರ್ಷಗಳ ಹಿಂದೆಯೇ ತಮ್ಮ ಮೂವರು ಗಂಡು ಮಕ್ಕಳಿಗೆ ಆಸ್ತಿ ಹಂಚಿಕೆ ಮಾಡಿ, ತಮಗಾಗಿ 12 ಎಕರೆ ಜಮೀನನ್ನು ಉಳಿಸಿಕೊಂಡಿದ್ದ ಅವರು ಕೃಷಿ ಮಾಡಿಕೊಂಡಿದ್ದರು.

ಜಮೀನಿನ ಮನೆಯಲ್ಲಿ ಮಲಗಿದ್ದ ಸಮಯದಲ್ಲಿ ಅನಾಮಧೇಯ ದುಷ್ಕರ್ಮಿಗಳು ಅವರ ತಲೆಯ ಮೇಲೆ ಕಲ್ಲಿನಿಂದ ಜಜ್ಜಿ ಕ್ರೂರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಪ್ರತಿದಿನ ಮುಂಜಾನೆ ಗ್ರಾಮಕ್ಕೆ ಹಾಲು ಪಡೆಯಲು ಬರುತ್ತಿದ್ದ ವೃದ್ಧ ಇಂದು ಬಾರದಿದ್ದಾಗ ಅನುಮಾನಗೊಂಡ ಗ್ರಾಮಸ್ಥರು ಜಮೀನಿಗೆ ಹೋಗಿ ನೋಡಿದಾಗ ಈ ಭೀಕರ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಹಾಗೂ ವಡಗೇರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಾಥಮಿಕ ತನಿಖೆಯ ವೇಳೆ ಹಂಪಣ್ಣ ಅವರು ಇತರ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು ಎಂಬ ಮಾಹಿತಿ ಗ್ರಾಮಸ್ಥರಿಂದ ಲಭ್ಯವಾಗಿದೆ. ಇದೇ ಕಾರಣಕ್ಕಾಗಿ ಯಾರಾದರೂ ದ್ವೇಷ ಸಾಧಿಸಿ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಸ್ತುತ ಯಾದಗಿರಿ ಸರ್ಕಲ್ ಇನ್ಸ್ಪೆಕ್ಟರ್ ನೇತೃತ್ವದ ತಂಡವು ಆರೋಪಿಗಳ ಪತ್ತೆಗಾಗಿ ತನಿಖೆಯನ್ನು ಚುರುಕುಗೊಳಿಸಿದೆ.

Comments (0)

Your email address will not be published. Required fields are marked *

Back to top button