ಪವಿತ್ರ ರಂಜಾನ್ ಮಾಸದ ಆಚರಣೆಯು ಸೌದಿ ಅರೇಬಿಯಾದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ಆರಂಭವಾಗಿದೆ. ಇಸ್ಲಾಂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುವ ಈ ಮಾಸವು ಫೆಬ್ರವರಿ 17 ರಂದು ಚಂದ್ರ ದರ್ಶನವಾಗುವ ಮೂಲಕ ಅಧಿಕೃತವಾಗಿ ಚಾಲನೆ ಪಡೆದಿದೆ. ಫೆಬ್ರವರಿ 18 ರಿಂದಲೇ ಮುಸ್ಲಿಂ ಬಾಂಧವರು ಉಪವಾಸ ವ್ರತವನ್ನು ಕೈಗೊಂಡಿದ್ದು, ಮೆಕ್ಕಾ ಮತ್ತು ಮದೀನಾ ಸೇರಿದಂತೆ ವಿಶ್ವದಾದ್ಯಂತದ ಮಸೀದಿಗಳಲ್ಲಿ ವಿಶೇಷ ತರಾವೀಹ್ ಪ್ರಾರ್ಥನೆಗಳು ಮಳಗುತ್ತಿವೆ. ಭಾರತದಲ್ಲಿ ಚಂದ್ರನ ದರ್ಶನದ ವ್ಯತ್ಯಾಸದಿಂದಾಗಿ ಫೆಬ್ರವರಿ 19 ರಿಂದ ಮೊದಲ ಉಪವಾಸವು ಪ್ರಾರಂಭವಾಗಲಿದ್ದು, ದೇಶಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ರಂಜಾನ್ ಉಪವಾಸ ಎಂಬುದು ಕೇವಲ ಆಹಾರ ಮತ್ತು ನೀರಿನ ತ್ಯಾಗವಲ್ಲ, ಬದಲಾಗಿ ಇದು ಆತ್ಮಶುದ್ಧೀಕರಣದ ಪ್ರಕ್ರಿಯೆಯಾಗಿದೆ. ಸೂರ್ಯೋದಯಕ್ಕೂ ಮುನ್ನ ‘ಸೆಹ್ರಿ’ ಸೇವಿಸಿ ಉಪವಾಸ ಸಂಕಲ್ಪ ಮಾಡುವ ವಿಶ್ವಾಸಿಗಳು, ಸೂರ್ಯಾಸ್ತದವರೆಗೆ ಕಠಿಣ ವ್ರತ ಆಚರಿಸಿ ನಂತರ ‘ಇಫ್ತಾರ್’ ಮೂಲಕ ಉಪವಾಸ ಮುರಿಯುತ್ತಾರೆ. ಈ ಅವಧಿಯಲ್ಲಿ ಕೆಟ್ಟ ಆಲೋಚನೆಗಳು, ಮಾತು ಮತ್ತು ನಡವಳಿಕೆಯಿಂದ ದೂರವಿದ್ದು, ಸಂಯಮ ಹಾಗೂ ಶಿಸ್ತನ್ನು ಮೈಗೂಡಿಸಿಕೊಳ್ಳುವುದು ಈ ಮಾಸದ ಮುಖ್ಯ ಉದ್ದೇಶವಾಗಿದೆ. ಇದು ಮನುಷ್ಯನನ್ನು ಭಗವಂತನಿಗೆ ಹತ್ತಿರವಾಗಿಸುವ ಮತ್ತು ಜೀವನದಲ್ಲಿ ತಾಳ್ಮೆಯನ್ನು ಕಲಿಸುವ ಪವಿತ್ರ ಕಾಲವೆಂದು ನಂಬಲಾಗಿದೆ.

ಈ ಮಾಸದಲ್ಲಿ ದಾನಧರ್ಮಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ಜಕಾತ್ ಮತ್ತು ಸದಾಗಾಗಳ ಮೂಲಕ ಬಡವರಿಗೆ ಹಾಗೂ ಅಸಹಾಯಕರನ್ನು ಕೈಹಿಡಿಯಲಾಗುತ್ತದೆ. ಭಗವಂತನಾದ ಅಲ್ಲಾಹನಿಗೆ ಸಮರ್ಪಿತವಾದ ಈ ಸಮಯದಲ್ಲಿ ಪ್ರಾರ್ಥನೆ, ಮಾನವೀಯತೆ ಮತ್ತು ಸಹೋದರತ್ವದ ಸಂದೇಶವನ್ನು ಸಾರಲಾಗುತ್ತದೆ. ಹಸಿವು ಮತ್ತು ನೀರಡಿಕೆಯ ಅನುಭವದ ಮೂಲಕ ಸಮಾಜದ ಕಷ್ಟದಲ್ಲಿರುವವರ ನೋವನ್ನು ಅರ್ಥಮಾಡಿಕೊಳ್ಳುವುದು ಹಾಗೂ ಎಲ್ಲರಲ್ಲೂ ಸಮಾನತೆಯ ಭಾವವನ್ನು ಬೆಳೆಸುವುದೇ ರಂಜಾನ್ ಹಬ್ಬದ ನೈಜ ಸಾರವಾಗಿದೆ.


