ಬೆಂಗಳೂರು : ಕೊರೊನಾ ಕೊಟ್ಟ ಹೊಡೆತದಿಂದ ಜನರು ಇನ್ನೂ ಹೊರಬಂದಿಲ್ಲ. ಹೀಗಿರುವಾಗಲೇ ಚೀನಾದಲ್ಲಿ ಮತ್ತೊಂದು ವೈರಸ್ ರಣಕೇಕೆ ಹಾಕುತ್ತಿದೆಯಂತೆ. ಹೀಗಿರುವಾಗ ಬೆಂಗಳೂರಿನಲ್ಲೂ ಹೆಚ್ಎಂಪಿ ವೈರಸ್ ಪತ್ತೆಯಾಗಿದ್ದು, ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್,2001ರಲ್ಲಿ ಪ್ರಥಮ ಬಾರಿಗೆ ಹೆಚ್ಎಂಪಿ ವೈರಸ್ ಪತ್ತೆಹಚ್ಚಲಾಗಿದೆ. 8 ತಿಂಗಳ ಮಗು ನಾರ್ಮಲ್ ಆಗಿದೆ. ಇಂದು ಅಥವಾ ನಾಳೆ ಆಸ್ಪತ್ರೆಯಿಂದ ಮಗು ಡಿಸ್ಚಾರ್ಜ್ ಆಗಲಿದೆ ಎಂದು ಹೇಳಿದ್ದಾರೆ.
ಆರೋಗ್ಯಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ಹೆಚ್ಎಂಪಿ ವೈರಸ್ ಇದು ಹೊಸದೇನಲ್ಲ. ಬಹಳ ವರ್ಷಗಳಿಂದ ಹೆಚ್ಎಂಪಿ ವೈರಸ್ ವಿಶ್ವದಾದ್ಯಂತ ಇದೆ. ಹೆಚ್ಎಂಪಿ ವೈರಸ್ನಿಂದ ಜೀವಕ್ಕೆ ಯಾವುದೇ ಅಪಾಯ ಇಲ್ಲ ಎಂದು ತಿಳಿಸಿದ್ದಾರೆ.
ಚೀನಾದಲ್ಲಿ ಮ್ಯೂಟೆಟ್ ಆಗಿದೆಯೋ ಏನೋ ನನಗೆ ಗೊತ್ತಿಲ್ಲ. ಚೀನಾದಲ್ಲಿನ ವೈರಸ್ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಬೇಕು. ದೇಶದಲ್ಲಿ ಹೆಚ್ಎಂಪಿ ವೈರಸ್ ರೀತಿ ನೂರಾರು ವೈರಸ್ಗಳಿವೆ. ಹೆಚ್ಎಂಪಿ ವೈರಸ್ ಬಗ್ಗೆ ಯಾವುದೇ ಆತಂಕಪಡುವ ಅಗತ್ಯವಿಲ್ಲ, ಆದರೆ ಮುಂಜಾಗ್ರತೆ ವಹಿಸಬೇಕು ಎಂದಿದ್ದಾರೆ.