ಶಿಮ್ಲಾ: ಅನೇಕ ಉಚಿತ ಗ್ಯಾರಂಟಿ ಯೋಜನೆ ಘೋಷಣೆ, ಹಳೆ ಪಿಂಚಣಿ ಯೋಜನೆ ಜಾರಿ ಬಳಿಕ ಭಾರೀ ಅರ್ಥಿಕ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿರುವ ಹಿಮಾಚಲ ಪ್ರದೇಶದಲ್ಲಿ ಇದೀಗ ಸರ್ಕಾರಿ ನೌಕರರ ವೇತನ ಪಾವತಿಯಲ್ಲೂ ವಿಳಂಬ ಕಂಡುಬಂದಿದೆ. ಸಾಮಾನ್ಯವಾಗಿ ಪ್ರತಿ ತಿಂಗಳ ಮೊದಲ ದಿನವೇ ಸರ್ಕಾರಿ ಸರ್ಕಾರಿ ನೌಕರರಿಗೆ ವೇತನ ಪಾವತಿಯಾಗುತ್ತಿತ್ತು.
ಆದರೆ ಆಗಸ್ಟ್ ತಿಂಗಳ ವೇತನ ಇನ್ನೂ ಅಧಿಕಾರಿಗಳ ಕೈ ಸೇರಿಲ್ಲ. ಇಂಥ ಬೆಳವಣಿಗೆ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಕಂಡು ಬಂದಿದ್ದು, ಈ ಬೆಳವಣಿಗೆ ಕುರಿತು ರಾಜ್ಯದ ಸರ್ಕಾರಿ ನೌಕರರು ಕಳವಳ ವ್ಯಕ್ತಪಡಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ರಾಜ್ಯದಲ್ಲಿನ ಆರ್ಥಿಕ ಪರಿಸ್ಥಿತಿಯ ಸಂಕಷ್ಟ ಬಿಚ್ಚಿಟ್ಟಿದ್ದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು, ತಾವೂ, ತಮ್ಮ ಸಚಿವ ಸಂಪುಟದ ಸದಸ್ಯರು, ನಿಗಮ ಮಂಡಳಿ ಸದಸ್ಯರು ತಮ್ಮ ವೇತನವನ್ನು 2 ತಂಗಳು ಪಡೆಯುವುದಿಲ್ಲ ಎಂದು ಹೇಳಿದ್ದರು. ಅದರೆ ಬೆನ್ನಲ್ಲೇ ಆರ್ಥಿಕ ಸಂಕಷ್ಟದ ಬಿಸಿ 2.15 ಲಕ್ಷ ಅಧಿಕಾರಿಗಳು ಮತ್ತು 90000 ನಿವೃತ್ತ ಸಿಬ್ಬಂದಿಗಳಿಗೆ ತಟ್ಟಿದೆ.
ಈಗಾಗಲೇ 86589 ಕೋಟಿ ರೂ. ಸಾಲದ ಹೊರೆ ಎದುರಿಸುತ್ತಿರುವ ಹಿಮಾಚಲ ಪ್ರದೇಶಕ್ಕೆ ಹಳೆಯ ಪಿಂಚಣಿ ಯೋಜನೆ ಜಾರಿ ಬಳಿಕ ನೀಡಬೇಕಾಗಿರುವ 10000 ಕೋಟಿ ರೂ. ಹಿಂಬಾಕಿ ಹೊರೆಯೂ ಅಪ್ಪಳಿಸಿದೆ. ಇದು ಸೀಮಿತ ಸಂಪನ್ಮೂಲ ಹೊಂದಿರುವ ಮತ್ತು ಪದೇ ಪದೇ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗುವ ರಾಜ್ಯದ ಸಂಕಷ್ಟವನ್ನು ಮತ್ತುಷ್ಟು ಹೆಚ್ಚಿಸಿದೆ.