ದೇಶ/ವಿದೇಶರಾಜಕೀಯರಾಜ್ಯ

ಭಾರತ್ ಮಂಟಪದಲ್ಲಿ ಹೈಡ್ರಾಮಾ; AI ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಯುವ ಕಾಂಗ್ರೆಸ್ ಪ್ರತಿಭಟನೆ!

ದೆಹಲಿ:ಭಾರತ್ ಮಂಟಪದಲ್ಲಿ ಆಯೋಜಿಸಲಾದ ‘ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026’ಸಮಾರೋಪದ ದಿನದಂದು ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಅನಿರೀಕ್ಷಿತವಾಗಿ ಪ್ರತಿಭಟನೆ ನಡೆಸಿದರು. ಸಭಾಂಗಣದ ಒಳಗೆ ಪ್ರವೇಶಿಸಿದ ಸುಮಾರು 10ಕ್ಕೂ ಹೆಚ್ಚು ಕಾರ್ಯಕರ್ತರು, ಎಕ್ಸ್‌ಪೋ ಹಾಲ್‌ ತಲುಪುತ್ತಿದ್ದಂತೆ ಇದ್ದಕ್ಕಿದ್ದಂತೆ ತಮ್ಮ ಶರ್ಟ್‌ಗಳನ್ನು ಬಿಚ್ಚಿ ಅರೆಬೆತ್ತಲೆಯಾಗಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲು ಆರಂಭಿಸಿದರು.

ಈ ಪ್ರತಿಭಟನೆಯ ಮುಖ್ಯ ಉದ್ದೇಶವೆಂದರೆ ಕೇಂದ್ರ ಸರ್ಕಾರವು ಅಮೆರಿಕದೊಂದಿಗೆ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದಗಳನ್ನು ವಿರೋಧಿಸುವುದಾಗಿತ್ತು. “ಭಾರತದ ದತ್ತಾಂಶ ಮತ್ತು ಅಸ್ಮಿತೆಯನ್ನು ಮಾರಾಟ ಮಾಡಲಾಗುತ್ತಿದೆ” ಎಂದು ಆರೋಪಿಸಿದ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಧಿಕ್ಕಾರ ಕೂಗಿದರು. ಅಮೆರಿಕದ ನೇತೃತ್ವದ ‘ಪ್ಯಾಕ್ಸ್ ಸಿಲಿಕಾ’ ಮೈತ್ರಿಗೆ ಭಾರತ ಸೇರ್ಪಡೆಯಾಗಿರುವುದನ್ನು ಇವರು ದೇಶದ ಹಿತಾಸಕ್ತಿಗೆ ಮಾರಕ ಎಂದು ಬಣ್ಣಿಸಿದರು.

ವಿಶ್ವದಾದ್ಯಂತ ತಂತ್ರಜ್ಞಾನ ಕ್ಷೇತ್ರದ ಗಣ್ಯರು ಭಾಗವಹಿಸಿದ್ದ ಈ ಅಂತರಾಷ್ಟ್ರೀಯ ವೇದಿಕೆಯಲ್ಲಿ ನಡೆದ ಈ ಘಟನೆಯಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ದೆಹಲಿ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಇವರು ಅಧಿಕೃತ ಕ್ಯೂಆರ್ ಕೋಡ್ ಅಥವಾ ಪಾಸ್ ಬಳಸಿ ಒಳಗೆ ಪ್ರವೇಶಿಸಿದ್ದರೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಿಜೆಪಿ ನಾಯಕರು ಈ ಘಟನೆಯನ್ನು “ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮಾಡಿದ ಅವಮಾನ” ಎಂದು ಟೀಕಿಸಿದ್ದು, ಕಾಂಗ್ರೆಸ್ ಪಕ್ಷದ ಈ ವರ್ತನೆಯನ್ನು ‘ಅಸಂವಿಧಾನಿಕ’ ಎಂದು ಕರೆದಿದ್ದಾರೆ. ಈ ನಡುವೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಸಹ ಈ ಶೃಂಗಸಭೆಯು ಕೇವಲ ಒಂದು “ಪಿಆರ್ ಪ್ರದರ್ಶನ” ಎಂದು ಈ ಮೊದಲೇ ಟೀಕಿಸಿದ್ದರು.

Comments (0)

Your email address will not be published. Required fields are marked *

Back to top button