
ನೌಕರರ ರಾಜ್ಯ ವಿಮಾ ನಿಗಮದ ವೈದ್ಯಕೀಯ ಕಾಲೇಜುಗಳಲ್ಲಿ ಸಬ್ಸಿಡಿ ದರದಲ್ಲಿ ಶಿಕ್ಷಣ ಪಡೆದ ವೈದ್ಯರು, ಒಂದು ವರ್ಷದ ಅವಧಿಗೆ ಕಡ್ಡಾಯವಾಗಿ ಇಎಸ್ಐಸಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಬೇಕು ಎಂಬ ನಿಯಮವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ. ಈ ನಿಯಮದಿಂದ ವಿನಾಯ್ತಿ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠವು, ಸಬ್ಸಿಡಿ ದರದಲ್ಲಿ ಶಿಕ್ಷಣ ಪಡೆದ ನಂತರ ಸಾರ್ವಜನಿಕ ಸೇವೆ ಮಾಡುವುದು ವಿದ್ಯಾರ್ಥಿಗಳ ಜವಾಬ್ದಾರಿಯಾಗಿದೆ.
ವಿದ್ಯಾರ್ಥಿಗಳು ಈ ಹಿಂದೆ ನೀಡಿದ್ದ ಬಾಂಡ್ ಪ್ರಕಾರ, ಒಂದು ವರ್ಷದ ಕಡ್ಡಾಯ ಸೇವೆಯನ್ನು ಮಾಡುವುದು ಅನಿವಾರ್ಯವಾಗಿದೆ. ಒಂದು ವೇಳೆ ಈ ಸೇವೆಯನ್ನು ಮಾಡಲು ಸಾಧ್ಯವಾಗದಿದ್ದಲ್ಲಿ, ಬಾಂಡ್ ಮೊತ್ತವಾದ 5 ಲಕ್ಷ ರೂಪಾಯಿಗಳನ್ನು ದಂಡದ ರೂಪದಲ್ಲಿ ಪಾವತಿಸಲು ಅವಕಾಶವಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ರೀತಿ ಬಾಂಡ್ ಪಡೆಯುವುದು ವಿದ್ಯಾರ್ಥಿಗಳ ಹಕ್ಕಿನ ಉಲ್ಲಂಘನೆಯಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ. ಈ ಹಿಂದೆ ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಇಎಸ್ಐಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಮಾನ್ಯ ಮಾಡಿರುವ ವಿಭಾಗೀಯ ಪೀಠವು, ಗ್ರಾಮೀಣ ಅಥವಾ ಸರ್ಕಾರಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವ ಕಡ್ಡಾಯ ನಿಯಮವು ಸಾಮಾಜಿಕ ಹಿತದೃಷ್ಟಿಯಿಂದ ಕೂಡಿದೆ ಎಂದು ತನ್ನ ಆದೇಶದಲ್ಲಿ ತಿಳಿಸಿದೆ.




