ಮಂಗಳೂರು: ವ್ಯಕ್ತಿ, ಪಕ್ಷ, ಜಾತಿ, ಧರ್ಮ ಎಂಬ ಭೇದ ಭಾವವನ್ನು ಮರೆತು ಸಮಾಜಮುಖಿ ಚಿಂತನೆ ಹಾಗೂ ಹೊಣೆಗಾರಿಕೆಯಿಂದ ಪತ್ರಕರ್ತರು ಕೆಲಸ ಮಾಡಿದಾಗ ಭವಿಷ್ಯದ ಭಾರತ ನಿರ್ಮಾಣ ಮಾಡಲು ಸಾಧ್ಯ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಕಿವಿಮಾತು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ದಿವಂಗತ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಗೌರವಾರ್ಥ ಹಮ್ಮಿಕೊಂಡಿದ್ದ ಕೆಯುಡಬ್ಲ್ಯೂಜೆ ರಾಜ್ಯ ಮಟ್ಟದ ಬ್ರ್ಯಾಂಡ್ ಮಂಗಳೂರು ರೋಹನ್ ಕಪ್-2024 ಕ್ರಿಕೆಟ್ ಟೂರ್ನಿಗೆ ಅವರು ಚಾಲನೆ ನೀಡಿ ಅವರು ಮಾತನಾಡಿದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಬ್ರ್ಯಾಂಡ್ ಮಂಗಳೂರು ಸ್ಲೋಗನ್ ಮೂಲಕ ಇಲ್ಲಿನ ಪತ್ರಕರ್ತರು ಕರಾವಳಿ ರಾಯಭಾರಿ ಆಗಿದ್ದಾರೆ. ಪತ್ರಕರ್ತರ ಸಂಘಗಳ ಅನ್ಯೋನ್ಯ ಚಟುವಟಿಕೆಗಳಿಗೆ ಎಲ್ಲರಿಗೂ ಮಾದರಿ ಆಗಿದ್ದು, ಇದು ಸಾಮಾಜಿಕ ಹಿತಾಸಕ್ತಿಯನ್ನು ಬೆಳೆಸಲು ಸಹಕಾರಿ ಆಗಿದೆ ಎಂದರು.
ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ದೀಪ ಬೆಳಗಿಸಿ ಕ್ರಿಕೆಟ್ ಟೂರ್ನಿಗೆ ಶುಭ ಹಾರೈಸಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಟ್ರೋಫಿ ಅನಾವರಣಗೊಳಿಸಿದರು. ಶಾಸಕ ವೇದವ್ಯಾಸ್ ಕಾಮತ್ ಅವರು ಪ್ರದರ್ಶನ ಪಂದ್ಯ ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಬ್ರ್ಯಾಂಡ್ ಮಂಗಳೂರು ಫಲಕ ಅನಾವರಣಗೊಳಿಸಿದರು.
ರೋಹನ್ ಕಾರ್ಪೊರೇಷನ್ ಆಡಳಿತ ನಿರ್ದೇಶಕ ರೋಹನ್ ಮೊಂತೆರೋ ಅವರು ಕ್ರೀಡಾ ಸಂಚಿಕೆ ಅನಾವರಣಗೊಳಿಸಿದರು. ಮೆರವಣಿಗೆಗೆ ಮಾಜಿ ಸಚಿವ ಅಭಯಚಂದ್ರ ಜೈನ್ ಚಾಲನೆ ನೀಡಿದರು. ಎಂಆರ್‌ಜಿ ಗ್ರೂಪ್ ಚೇರ್‌ಮೆನ್ ಪ್ರಕಾಶ್ ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದರು. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಕಾರ್ಟೂನ್ ಪ್ರದರ್ಶನ ಉದ್ಘಾಟಿಸಿದರು. ಮಂಗಳೂರಿನ ಜಾಗತಿಕ ಬಂಟರ ಸಂಘಗಳ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಪಥ ಸಂಚಲನಕ್ಕೆ ಚಾಲನೆ ನೀಡಿದರು. ಐಎಫ್‌ಡಬ್ಲ್ಯೂಜೆ ಪ್ರಧಾನ ಕಾರ್ಯದರ್ಶಿ ಮದನ್ ಗೌಡ ಅವರು ಕ್ಯಾಪ್ ಹಸ್ತಾಂತರಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು. ಕೆಐಒಸಿಎಲ್ ಅಧ್ಯಕ್ಷ ಸಾಮಿನಾಥನ್, ದ.ಕ. ಬಸ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ದಿಲ್‌ರಾಜ್ ಆಳ್ವ, ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜಿ ಸಿ ಲೋಕೇಶ, ರಾಜ್ಯ ಕಾರ್ಯ ಸಮಿತಿ ಸದಸ್ಯರಾದ ಬಾಳ ಜಗನ್ನಾಥ ಶೆಟ್ಟಿ, ಇಬ್ರಾಹಿಂ ಅಡ್ಕಸ್ಥಳ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ಹಿರಿಯ ಪತ್ರಕರ್ತ ಮನೋಹರ ಪ್ರಸಾದ್, ಕ್ರೀಡಾಕೂಟ ಸಂಚಾಲಕ ಅನ್ನು ಮಂಗಳೂರು ಇದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಪತ್ರಕರ್ತರ ಸಂಘದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ. ಬಿ. ಹರೀಶ್ ರೈ ನಿರೂಪಿಸಿದರು.