DAVANAGEREಜಿಲ್ಲೆಸುದ್ದಿ

ರಂಜಾನ್ ನಮಾಜ್ ವೇಳೆ ಹೆಜ್ಜೇನು ಅಟ್ಯಾಕ್;೧೦ಕ್ಕೂ ಹೆಚ್ಚು ಮಂದಿಗೆ ಗಾಯ!

ದಾವಣಗೆರೆ: ಆನಗೋಡು ಗ್ರಾಮದಲ್ಲಿ ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆ ಸಲ್ಲಿಕೆಯಾಗುತ್ತಿದ್ದ ವೇಳೆ ಹೆಜ್ಜೇನುಗಳು ಏಕಾಏಕಿ ದಾಳಿ ನಡೆಸಿದ ಘಟನೆ ನಡೆದಿದೆ. ಹಬ್ಬದ ಸಂಭ್ರಮದಲ್ಲಿದ್ದ ಮುಸ್ಲಿಂ ಬಾಂಧವರು ಈದ್ಗಾ ಮೈದಾನದಲ್ಲಿ ಭಕ್ತಿಯಿಂದ ನಮಾಜ್ ಸಲ್ಲಿಸುತ್ತಿದ್ದಾಗ, ಅನಿರೀಕ್ಷಿತವಾಗಿ ಜೇನುನೊಣಗಳ ಗುಂಪು ದಾಳಿ ಇಟ್ಟಿದೆ. ಇದರಿಂದಾಗಿ ಮೈದಾನದಲ್ಲಿದ್ದ ನೂರಾರು ಜನರು ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಜೇನು ದಾಳಿಯಿಂದಾಗಿ ಮಕ್ಕಳು ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಘಟನೆ ನಡೆದ ತಕ್ಷಣ ಸ್ಥಳೀಯರು ಹಾಗೂ ಇತರರು ಸೇರಿ ಗಾಯಾಳುಗಳನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಹಬ್ಬದ ದಿನವೇ ಇಂತಹ ಘಟನೆ ನಡೆದಿರುವುದು ಆನಗೋಡು ಗ್ರಾಮಸ್ಥರಲ್ಲಿ ಆತಂಕ ಮತ್ತು ವಿಷಾದ ಮೂಡಿಸಿದೆ. ಸದ್ಯ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎಸ್. ಬಸವಂತಪ್ಪ ಅವರು ದಾವಣಗೆರೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದರು. ಗಾಯಾಳುಗಳ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದ ಶಾಸಕರು, ಸಂತ್ರಸ್ತರಿಗೆ ಧೈರ್ಯ ತುಂಬಿದರಲ್ಲದೆ, ಗಾಯಗೊಂಡವರಿಗೆ ಕೂಡಲೇ ಸೂಕ್ತ ಮತ್ತು ತುರ್ತು ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Comments (0)

Your email address will not be published. Required fields are marked *

Back to top button