ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ಹಾಗೂ ಸೇನೆಯೊಂದಿಗಿನ ಕಿತ್ತಾಟ ತಾರಕಕ್ಕೇರಿದ ಬೆನ್ನಲ್ಲೇ ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ (Sheikh Hasina) ರಾಜೀನಾಮೆ ನೀಡಿ ದೇಶ ತೊರೆದಿದ್ದಾರೆ. ಸದ್ಯ ಅವರು ಮಿತ್ರರಾಷ್ಟ್ರ ಭಾರತದ (India) ಮೂಲಕ ಲಂಡನ್‌ಗೆ ಪಲಾಯನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ರಾಜೀನಾಮೆ ನೀಡಿದ ಕೆಲವೇ ಕ್ಷಣಗಳಲ್ಲಿ ಅಂದ್ರೆ ಮಧ್ಯಾಹ್ನ 2:30ರ ಸುಮಾರಿಗೆ ಸೇನಾ ಹೆಲಿಕಾಪ್ಟರ್‌ನಲ್ಲಿ ಬಂಗಾಬಬಾನ್‌ನಿಂದ ಅವರ ಕಿರಿಯ ಸಹೋದರಿ ಶೇಖ್ ರೆಹಾನಾ ಅವರೊಂದಿಗೆ ಸುರಕ್ಷಿತ ಸ್ಥಳಕ್ಕೆ ಪ್ರಯಾಣ ಬೆಳೆಸಿದರು. ಹಸೀನಾ ಅವರು ಭಾರತದೊಂದಿಗೆ ಹೆಚ್ಚು ಮಿತ್ರತ್ವ ಹೊಂದಿರುವ ಕಾರಣ, ಭಾರತಕ್ಕೆ ಆಗಮಿಸಿ ಅಲ್ಲಿಂದ ಲಂಡನ್‌ಗೆ (London) ತೆರಳಿದ್ದಾರೆ ಎಂದು ವರದಿಯಾಗಿದೆ. ಪ್ರಧಾನಿ (Prime Minister) ಹುದ್ದೆಗೆ ಶೇಖ್ ಹಸೀನಾ ರಾಜೀನಾಮೆ ನೀಡಿದ ಬೆನ್ನಲ್ಲೇ ಭಾರತ-ಬಾಂಗ್ಲಾದೇಶದ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಬಿಎಸ್‌ಎಫ್ ಭದ್ರತಾ ಪಡೆಯನ್ನು ನಿಯೋಜಿಸಲಾಗಿದ್ದು, ಬಿಎಸ್‌ಎಫ್ ಡಿಜಿ ಕೂಡ ಬಾಂಗ್ಲಾ ಗಡಿಗೆ ತಲುಪಿದ್ದಾರೆ ಎಂದು ಬಿಎಸ್‌ಎಫ್ ಪ್ರಕಟಣೆ ಹೊರಡಿಸಿದೆ.