ಬೆಂಗಳೂರು: ಮಳೆಯಿಲ್ಲದೆ ನೀರಿಗೂ ಬರಗಾಲ ಬಂದಿದ್ದ ಬೆಂಗಳೂರಿಗರಿಗೆ ವರುಣ ಅಂತೂ ಪ್ರವೇಶಿಸಿದ್ದಾನೆ. ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಮಳೆಯಾಗಿದ್ದು, ಶುಕ್ರವಾರ ಮಧ್ಯಾಹ್ನ ನೋಡನೋಡುತ್ತಿದ್ದಂತೆ ಮಳೆಯಾಗಿದ್ದು ವರ್ಷಧಾರೆಗೆ ಸಿಟಿ ಜನರು ಖುಷಿಪಟ್ಟರು.
ಸದಾಶಿವನಗರ, ಶಿವಾಜಿನಗರ, ಮಲ್ಲೇಶ್ವರಂ, ವಿಧಾನಸೌಧ, ರಾಜಾಜಿನಗರ, ರೇಸ್ ಕೋರ್ಸ್, ಮೆಜೆಸ್ಟಿಕ್, ಮಹಾರಾಣಿ ಕಾಲೇಜು, ಸಿಐಡಿ ಆಫೀಸ್, ಪ್ಯಾಲೇಸ್ ರಸ್ತೆಯಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ಮಧ್ಯಾಹ್ನ ಮೂರು ಗಂಟೆ ಸಮಯವು ರಾತ್ರಿಯಂತೆ ಕತ್ತಲೆ ಆವರಿಸಿತ್ತು. ದಿಢೀರ್ ಮಳೆಗೆ ದ್ವಿಚಕ್ರ ವಾಹನ ಸವಾರರು ಸೇತುವೆ ಕೆಳಗೆ ಹಾಗೂ ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆದರು.
ಮಧ್ಯಾಹ್ನದ ಊಟ ಮುಗಿಸಿ ಹೊರಗೆ ಬಂದವರಿಗೆ ಗುಡುಗು, ಸಿಡಿಲು ಸಹಿತ ಭರ್ಜರಿ ಮಳೆ ಸುರಿದಿದೆ. ಇದನ್ನು ನೋಡಿದ ಬೆಂಗಳೂರು ಜನ ಸದ್ಯ ಮಳೆ ಬಂತಲ್ಲ ಎಂದು ನಿಟ್ಟುಸಿರು ಬಿಟ್ಟರು .


