
ಹಿಮಾಚಲ ಪ್ರದೇಶ: ನಿರಂತರ ಮಳೆಯಿಂದ ನೀರಿನ ಮಟ್ಟ ಏರಿಕೆಯಾದ ಪರಿಣಾಮ ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿರುವ ಮಲಾನಾ-I ಜಲವಿದ್ಯುತ್ ಯೋಜನೆಯ ಕಾಫರ್ ಡ್ಯಾಮ್ ಕುಸಿದಿದೆ. ಡ್ಯಾಂ ಕುಸಿತದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಡ್ಯಾಂ ಕುಸಿತದಿಂದ ಕೆಳಭಾಗದ ಪ್ರದೇಶಗಳಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಭಾರೀ ಮಳೆಯಿಂದ ಈಗಾಗಲೇ ಉಕ್ಕಿ ಹರಿಯುತ್ತಿದ್ದ ಪಾರ್ವತಿ ನದಿಯು ಅನಿಯಂತ್ರಿತವಾಗಿ ಉಕ್ಕಿ ಹರಿದ್ದಿದ್ದು, ಅಣೆಕಟ್ಟಿನ ಬಳಿ ಇರಿಸಲಾಗಿದ್ದ ಹೈಡ್ರಾ ಕ್ರೇನ್, ಡಂಪರ್ ಟ್ರಕ್, ರಾಕ್ ಬ್ರೇಕರ್ ಮತ್ತು ಕ್ಯಾಂಪರ್ ವಾಹನ ಸೇರಿದಂತೆ ಹಲವು ಯಂತ್ರೋಪಕರಣಗಳು ಕೊಚ್ಚಿ ಹೋಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಭುಂತರ್ ಬಳಿ ಬಿಯಾಸ್ ನದಿಯೊಂದಿಗೆ ಸಂಗಮಿಸುವ ಪಾರ್ವತಿ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಭಯಕ್ಕೆ ಕಾರಣವಾಗಿದೆ. ಇತ್ತೀಚೆಗೆ ಮಂಡಿಯ ಪಾಂಡೋಹ್ ಅಣೆಕಟ್ಟು ಬಳಿ ಚಂಡೀಗಢ-ಮನಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಬೃಹತ್ ಭೂಕುಸಿತದ ನಂತರ ಈ ಘಟನೆ ಸಂಭವಿಸಿದ್ದು, ಪ್ರಮುಖ ಮಾರ್ಗವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಭೂಕುಸಿತ ಮತ್ತು ಬೃಹತ್ ಗಾತ್ರದ ಕಲ್ಲು ಬಂಡೆಗಳು ಹೆದ್ದಾರಿಗೆ ಉರುಳಿ ಬಿದ್ದಿದ್ದು, ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಚಂಬಾ, ಕುಲ್ಲು, ಮಂಡಿ ಮತ್ತು ಉನಾದಲ್ಲಿನ ಒಳ ಮಾರ್ಗಗಳು ಸಹ ಪ್ರವೇಶಿಸಲಾಗದ ಕಾರಣ ಪರಿಹಾರ ಕಾರ್ಯಗಳಿಗೆ ಅಡ್ಡಿಯಾಗಿದೆ.
ನಿರಂತರ ಮಳೆಯಿಂದ ರಾಜ್ಯಾದ್ಯಂತ 383 ರಸ್ತೆಗಳು ಮುಚ್ಚಿಹೋಗಿದ್ದು, 747 ವಿದ್ಯುತ್ ಟ್ಯಾನ್ಸ್ಫಾರ್ಮರ್ಗಳು ಹಾನಿಯಾಗಿದೆ. ಇನ್ನು ಮಳೆಯಿಂದ ಈವರೆಗೂ ರಾಜ್ಯದಲ್ಲಿ 173 ಮಂದಿ ಸಾವಿಗೀಡಾಗಿದ್ದಾರೆ.




