ಸೌದಿ ಅರೆಬಿಯಾದಲ್ಲಿ ಮೆಕ್ಕಾದಿಂದ ಮದೀನಾಗೆ ಭಾರತೀಯ ಉಮ್ರಾ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಡೀಸೆಲ್ ಟ್ಯಾಂಕರ್ ಗೆ ಡಿಕ್ಕಿ ಹೊಡೆದ ಪರಿಣಾಮ, ಬಸ್ ನಲ್ಲಿದ್ದ ಸುಮಾರು 42 ಮಂದಿ ಭಾರತೀಯರು ಸಜೀವ ದಹನ ಆಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ..
ಸೋಮವಾರ ಬೆಳಗಿನ ಜಾವ ಮೆಕ್ಕಾದಿಂದ ಮದೀನಾಗೆ ಭಕ್ತರನ್ನು ಕರೆದೊಯ್ಯಲಾಗುತ್ತಿತ್ತು.ಬಸ್ ನಲ್ಲಿ 20 ಮಹಿಳೆಯರು ಮತ್ತು 11 ಮಕ್ಕಳು ಬಸ್ಸಿನಲ್ಲಿದ್ದರು. ಈ ವೇಳೆ ಬಸ್ ಡೀಸೆಲ್ ಟ್ಯಾಂಕರ್ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಬಸ್ಸಿನಲ್ಲಿದ್ದ 42 ಭಾರತೀಯ ಉಮ್ರಾ ಯಾತ್ರಿಕರು ಸಜೀವ ದಹನವಾಗಿದ್ದಾರೆಂದು ತಿಳಿದುಬಂದಿದೆ.
ಸ್ಥಳದಲ್ಲಿ ತುರ್ತು ಕಾರ್ಯಾಚರಣೆಗಳು ನಡೆಯುತ್ತಿದ್ದು, ಹಜ್ ಮತ್ತು ಉಮ್ರಾ ಸಚಿವಾಲಯ ಹಾಗು ಪ್ರಯಾಣ ಸಂಸ್ಥೆ ಅಪಘಾತವನ್ನು ದೃಢಪಡಿಸಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಸ್ಥಳೀಯ ಮೂಲಗಳು 42 ಸಾವುಗಳನ್ನು ವರದಿ ಮಾಡಿದ್ದರೂ, ಅಧಿಕಾರಿಗಳು ಇನ್ನೂ ನಿಖರ ಸಾವುನೋವುಗಳ ಸಂಖ್ಯೆ ಮತ್ತು ಬದುಕುಳಿದವರ ಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ.
ಘಟನೆಯಲ್ಲಿ ಓರ್ವ ಯುವಕ ಮಾತ್ರ ಬದುಕುಳಿದಿದ್ದು, ಆತನನ್ನು 25 ವರ್ಷದ ಅಬ್ದುಲ್ ಶುಹೈಬ್ ಮೊಹಮ್ಮದ್ ಎಂದು ಗುರುತಿಸಲಾಗಿದೆ. ಘಟನೆಯ ಸಂದರ್ಭದಲ್ಲಿ ಯಾತ್ರಿಕರೆಲ್ಲರೂ ನಿದ್ರೆಯಲ್ಲಿದ್ದದ್ದರಿಂದ ಭಾರೀ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಯಾತ್ರಿಕರಿಗೆ ಉಮ್ರಾ ವೀಸಾ ಮತ್ತು ಪ್ರಯಾಣದ ವ್ಯವಸ್ಥೆ ಮಾಡಿದ್ದ ಏಜೆನ್ಸಿಗಳು ಮುಂದಿನ ಎಲ್ಲ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಹಜ್ ಮತ್ತು ಉಮ್ರಾ ಸಚಿವಾಲಯದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಮೃತರೆಲ್ಲರೂ ಹೈದರಾಬಾದ್ ಮೂಲದವರೆಂದು ಹೇಳಲಾಗುತ್ತಿದ್ದು, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರು ಆಘಾತ ವ್ಯಕ್ತಪಡಿಸಿದ್ದಾರೆ.
ತೆಲಂಗಾಣ ನಿವಾಸಿಗಳ ಸಂಖ್ಯೆ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸುವಂತೆ ಮುಖ್ಯಮಂತ್ರಿಗಳು ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ಸೂಚನೆ ನೀಡಿದ್ದಾರೆ. ಕೇಂದ್ರ ವಿದೇಶಾಂಗ ಸಚಿವಾಲಯ ಮತ್ತು ಸೌದಿ ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಅಗತ್ಯ ಪರಿಹಾರ ಕ್ರಮಗಳನ್ನು ವಿಳಂಬವಿಲ್ಲದೆ ಪ್ರಾರಂಭಿಸುವಂತೆ ಸೂಚಿಸಿದ್ದಾರೆ.
ಸಿಎಂ ಸೂಚನೆ ಬೆನ್ನಲ್ಲೇ ಮುಖ್ಯ ಕಾರ್ಯದರ್ಶಿ ಕೆ. ರಾಮಕೃಷ್ಣ ರಾವ್ ಅವರು ದೆಹಲಿಯಲ್ಲಿ ಸಮನ್ವಯ ಕಾರ್ಯದರ್ಶಿ ಗೌರವ್ ಉಪ್ಪಲ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಕುಟುಂಬಗಳಿಗೆ ಮಾಹಿತಿ ನೀಡಲು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದ್ದಾರೆ.
ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಅಸಾದುದ್ದೀನ್ ಓವೈಸಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಹೈದರಾಬಾದ್ ಮೂಲದ ಎರಡು ಪ್ರಯಾಣ ಏಜೆನ್ಸಿಗಳನ್ನು ಸಂಪರ್ಕಿಸಿ ಪ್ರಯಾಣಿಕರ ಮಾಹಿತಿಯನ್ನು ರಿಯಾದ್ ರಾಯಭಾರ ಕಚೇರಿಯೊಂದಿಗೆ ಹಂಚಿಕೊಂಡಿದ್ದೇನೆ. ರಿಯಾದ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿ ಅಬು ಮಾಥೇನ್ ಜಾರ್ಜ್ ಅವರೊಂದಿಗೆ ಮಾತಕತೆ ನಡೆಸಲಾಗಿದೆ. ಅವರು ಸ್ಥಳೀಯ ಅಧಿಕಾರಿಗಳಿಂದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆಂದು ತಿಳಿಸಿದ್ದಾರೆ.


