Wednesday, April 30, 2025
24.6 C
Bengaluru
LIVE
ಮನೆಜಿಲ್ಲೆಮಾವಿನಕೆರೆ ರಂಗನಾಥನಿಗೆ ಹರಕೆ ತೀರಿಸಿದ ದೇವೇಗೌಡರು

ಮಾವಿನಕೆರೆ ರಂಗನಾಥನಿಗೆ ಹರಕೆ ತೀರಿಸಿದ ದೇವೇಗೌಡರು

ಹಾಸನ: ನನ್ನ ಆರೋಗ್ಯ ಗುಣಮುಖವಾದರೆ ನಿನ್ನ ಸಮ್ಮುಖದಲ್ಲಿ 1001 ಕಳಸ, ಪೂಜಾ ಕೈಂಕರ್ಯ ಮಾಡ್ತೀನಿ ಎಂದು ಮಾವಿನಕೆರೆ ರಂಗನಾಥಸ್ವಾಮಿಗೆ ಹರಕೆ ಕಟ್ಟಿಕೊಂಡಿದ್ದು, ಅದನ್ನಿಂದು ತೀರಿಸಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹೇಳಿದರು.

ನನ್ನ ಆರೋಗ್ಯ ಸರಿ ಇರಲಿಲ್ಲ. ಎರಡು ವರ್ಷ ಭಗವಂತನ ಅನುಗ್ರಹದಿಂದ ಬದುಕಿದ್ದೇನೆ. ನನ್ನ ಅಳಿಯ ಡಾ.ಮಂಜುನಾಥ್, ಮಣಿಪಾಲ್ ಆಸ್ಪತ್ರೆ ಮುಖ್ಯಸ್ಥರಾದ ಡಾ.ಸುದರ್ಶನ್ ಬಲ್ಲಾಳ್ ಮತ್ತು ಅವರ ತಂಡ ೨ ವರ್ಷದಿಂದ ನನ್ನನ್ನು ನೋಡಿಕೊಳ್ಳುತ್ತಿದ್ದಾರೆ. ನಿನ್ನೆ ಸಂಜೆ 6 ಗಂಟೆಯಿಂದ ರಂಗನಾಥನ ಸಾನಿಧ್ಯದಲ್ಲಿ ವಿಧಿವತ್ತಾಗಿ, ಶಾಸ್ತ್ರೋಕ್ತವಾಗಿ, ನಮ್ಮ ಸಂಪ್ರದಾಯದಂತೆ ಪೂಜಾ ಕಾರ್ಯ ಮಾಡುತ್ತಿದ್ದೇವೆ ಎಂದರು. ತುಂಬಾ ಜನ ಪುರೋಹಿತರಿದ್ದಾರೆ, ಹೊರಗಡೆಯಿಂದಲೂ ಬಂದಿದ್ದಾರೆ. ನಾಳೆ 4 ಗಂಟೆಗೆ ಪೂಜೆ ಮುಗಿಯಬಹುದು. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿದರು. ಯಾರೂ ರಾಜಕೀಯ ಬೆರಸಬಾರದು ಎಂದು ವಿನಂತಿಸಿದರು. ನಾನು, ನನ್ನ ಶ್ರೀಮತಿ, ಸೊಸೆ ಭವಾನಿ, ಪುತ್ರ ರೇವಣ್ಣ ಇದ್ದಾರೆ. ನಾವು ದೇವರನ್ನು ನಂಬಿದ್ದೇವೆ. ನಮ್ಮ ತಂದೆ ಇಲ್ಲಿನ ಹಳೆಯ ದಾರಿಯಲ್ಲಿ ನನ್ನನ್ನು ಕರೆದುಕೊಂಡು ಬರ್ತಿದ್ದರು ಎಂದು ನೆನಪು ಮಾಡಿಕೊಂಡರು.

ಮೂರ‍್ನಾಲ್ಕು, ಐದು ಶ್ರಾವಣ ಶನಿವಾರ ಬರುತ್ತೆ. ಈ ಪೂಜಾ ಕಾರ್ಯಕ್ರಮದ ವ್ಯವಸ್ಥೆಯನ್ನು ನಾನು, ರೇವಣ್ಣ ಮಾಡಿದ್ರೆ ಅಪಾರ್ಥ ಕಲ್ಪಿಸುತ್ತಾರೆ. ಅದಕ್ಕೇ ನನ್ನ ಮಿತ್ರರಿಗೆ ಹೇಳಿದ್ದೆ. ಅವರೇ ಖದ್ದು ನಿಂತು ಎಲ್ಲಾ ಮಾಡಿದ್ದಾರೆ ಎಂದ ಗೌಡರು, ಬಂದ ಎಲ್ಲರಿಗೂ ಸಮರ್ಪಕವಾಗಿ ಪ್ರಸಾದ ವಿತರಿಸಿದ್ದಾರೆ ಎಂದು ಹೇಳಿದರು. ರಂಗನಾಥನ ಆಶೀರ್ವಾದಿಂದ ರಾಜಕೀಯದಲ್ಲಿ ನಾನು ಬೆಳೆದಿದ್ದೇನೆ. ನನಗೆ 8 ವರ್ಷವಿದ್ದಾಗ (80 ವರ್ಷಗಳ ಹಿಂದೆ) ಈ ಕಾರ್ಯಕ್ರಮ ನಡೆದಿತ್ತು. ನಾಳೆ ಬಹಳ ಭಕ್ತಾಧಿಗಳು ಬರ್ತಾರೆ. ಅಂತಿಮವಾಗಿ ಕಳಸ ಪ್ರತಿಷ್ಠಾಪನೆ ಮಾಡ್ತಾರೆ. ಈ ಅವಕಾಶ ಮಾಡಿಕೊಟ್ಟ ದೇವರಿಗೆ ನಾನು ತುಂಬಾ ಅಬಾರಿಯಾಗಿದ್ದೇನೆ ಎಂದು ನುಡಿದರು.

ನನಗೆ ಕಿಡ್ನಿ ಫೇಲಾಗಿ ತೊಂದರೆ ಆಯ್ತು, ಈಗ ಎಲ್ಲಾ ಸರಿ ಹೋಗಿದೆ. ನಾನು ಆರೋಗ್ಯವಾಗಿರಲು ಡಾಕ್ಟರ್‌ಗಳ ಪ್ರಾಮಾಣಿಕ ಪ್ರಯತ್ನ ಕಾರಣ. ಭಗವಂತನ ಅನುಗ್ರಹ, ನನ್ನ ಅಳಿಯ, ಸುದರ್ಶನ್ ಬಲ್ಲಾಳ್ ಅಂಡ್ ಅವರ ತಂಡದ ಪ್ರಯತ್ನದ ಫಲವಾಗಿ ಸುಧಾರಿಸಿದ್ದೇನೆ ಎಂದು ಹೇಳಿದರು.

ವಯಸ್ಸಿನ ಕಾರಣದಿಂದ ನನಗೆ ಮಂಡಿ ನೋವಿದೆ. ಆದರೆ ಜ್ಞಾಪಕಶಕ್ತಿ ಇದೆ. ಹಿಂದೆ ಕಾಂಗ್ರೆಸ್‌ನಿಂದ ಟಿಕೆಟ್ ತಪ್ಪಿತು, 10 ರೂ. ಬಾಡಿಗೆ ಮನೆಯಲ್ಲಿದ್ದೆ, ಆಗ ನನ್ನ ಹೆಂಡ್ತಿ ಹೇಳಿದ್ರು. ಆ ರಂಗನಾಥ ಇದ್ದಾನೆ ಚುನಾವಣೆಗೆ ನಿಂತುಕೊಳ್ಳಿ ಅಂತ, ಜನರೇ ದುಡ್ಡು ಹಾಕಿ ಚುನಾವಣೆ ಮಾಡಿದ್ರು ಗೆದ್ದೆ ಎಂದು ನೆನಪು ಮಾಡಿಕೊಂಡರು. ಅಲ್ಲಿಂದ ಪ್ರಧಾನಮಂತ್ರಿ ಆದೆ ಎಂದು ರಾಜಕೀಯ ಪಯಣ ವಿವರಿಸಿದರು. ನಾನು ರಾಜಕಾರಣ ಆರಂಭಿಸುವಾಗಲೂ ರಂಗನಾಥನ ಆಶೀರ್ವಾದ ಪಡೆದಿದ್ದೇನೆ. ನನಗೆ ೩ ವರ್ಷ ಇದ್ದಾಗಿ ನಿಂದಲೂ ಈ ದೇವರ ಆಶೀರ್ವಾದ ಪಡೆದಿದ್ದೇನೆ. ಆ ಭಗವಂತನ ಅನುಗ್ರಹದಿಂದ ಬದುಕಿದ್ದೇನೆ ಎಂದು ಹೇಳಿದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments