ಹುಬ್ಬಳ್ಳಿ : ಅವರಿಬ್ಬರು ಸ್ನೇಹಿತರು, ಒಂದೇ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಒಬ್ಬರಿಗೆ ಕಷ್ಟ ಎಂದರೆ ಸಾಕು, ಮತ್ತೊಬ್ಬರು ಸಹಾಯ, ಸಹಕಾರ ನೀಡುತ್ತಿದ್ದರು. ಆದರೆ ಅದೇನು ಆಯ್ತೊ ಗೊತ್ತಿಲ್ಲ..! ಪ್ರಾಣಕ್ಕೆ ಪ್ರಾಣವಾಗಿದ್ದ ಸ್ನೇಹಿತನ ಉಸಿರು ನಿಲ್ಲುವಂತೆ ಮಾಡಿದ್ದಾನೆ ಇನ್ನೊಬ್ಬ ಸ್ನೇಹಿತ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ಈ ಕೆಳಗೆ ಹೇಳತ್ತೇವೆ ನೋಡಿ.
ಹೀಗೆ ಅರೆಬರೆ ಬೆಂದು ಮೃತಪಟ್ಟಿರುವ ಈತ ವಿಜಯ ಸುರೇಶ ಬಸವಾ (25) ಅಂತಾ. ಹೆಗ್ಗೇರಿ ಮಾರುತಿ ನಗರದ ನಿವಾಸಿಯಾಗಿದ್ದ, ಕಳೆದ ಮಂಗಳವಾರ ಈತನನ್ನು ಕಾರವಾರ ರಸ್ತೆಯ ರೈಲ್ವೆ ಇಲಾಖೆಗೆ ಸೇರಿದ್ದ ಮೈದಾನದಲ್ಲಿ ಕಲ್ಲು ಎತ್ತಿ ಹಾಕಿ, ಪೆಟ್ರೋಲ್ ಸುರಿದು ಸುಟ್ಟು ಹಾಕಿ ಅಮಾನವೀಯವಾಗಿ ಕೊಲೆ ಮಾಡಲಾಗಿತ್ತು. ಈ ಕುರಿತು ಹಳೇ ಹುಬ್ಬಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ದೂರು ದಾಖಲಾದ 24 ಗಂಟೆಯಲ್ಲಿ ಪ್ರಕರಣವನ್ನು ಪೋಲಿಸರು ಭೇದಿಸುವ ಕೆಲಸ ಮಾಡಿದ್ದಾರೆ.
ವಿಜಯ ಬಸವಾ ಕೊಲೆಗೆ ಅನೈತಿಕ ಸಂಬಂಧವೇ ಕಾರಣವೆಂದು ಗೊತ್ತಾಗಿದ್ದು, ಈತನನ್ನು ಜೀವಕ್ಕೆ ಜೀವವಾಗಿದ್ದ ಸ್ನೇಹಿತನೇ ಕೊಲೆ ಗೈದಿದ್ದಾನೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ವೊಡಾಫೋನ್ ಐಡಿಯಾ ಕಂಪನಿಯಲ್ಲಿ ಟೀಮ್ ಲೀಡರ್ ಆಗಿದ್ದ ವಿಜಯ ಒಂದು ಕೈ ಸ್ವಾಧೀನತೆ ಇರದೇ ಇದ್ದರು ಉತ್ತಮವಾಗಿ ಕೆಲಸ ಮಾಡುತ್ತಿದ್ದ. ಎಲ್ಲರೊಂದಿಗೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದ. ಅದರಂತೆ ಮಂಟೂರ ರಸ್ತೆಯ ಮಿಲ್ಲತ್ ನಗರದ ನಿವಾಸಿ ಸೈಯದ್ ಅಜರ್ (25) ಎಂಬಾತನ ಜೊತೆಗೆ ಆತ್ಮೀಯ ಸ್ನೇಹವನ್ನು ಹೊಂದಿದ್ದ. ಆದರೆ ಇದೇ ಸ್ನೇಹ ವಿಜಯನ ಪ್ರಾಣವನ್ನು ತೆಗೆಯುವಂತೆ ಮಾಡಿದೆ.
ವಿಜಯ ಹಾಗೂ ಸೈಯದ್ ಒಂದೇ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಹಿನ್ನೆಲೆಯಲ್ಲಿ ತುಂಬಾ ಆತ್ಮೀಯರು ಆಗಿದ್ದರು. ಎಷ್ಟರಮಟ್ಟಿಗೆ ಅಂದರೆ ಸ್ನೇಹದಲ್ಲಿ ಯಾರಿಗಾದರೂ ಕಷ್ಟ ಎಂದರೆ ಪರಸ್ಪರ ಸಹಾಯ ಮಾಡುವಷ್ಟು. ಅದರಂತೆ ವಿಜಯ ಸೈಯದ್ ಮನೆಗೆ ಹೋಗುವುದು, ಸೈಯದ್ ಫೋನ್ ಸರಿಯಿಲ್ಲದಾಗ ಸೈಯದ್ ಮನೆಯವರು ವಿಜಯ ಫೋನ್ ಗೆ ಕರೆ ಮಾಡಿ ವಿಚಾರಿಸುವುದು ಮಾಡುತ್ತಿದ್ದರಂತೆ.
ಆದರೆ ಇದೇ ಸಲಹೆ ಮುಂದುವರೆದು ವಿಜಯ ಸೈಯದ್ ಹೆಂಡತಿ ಜತೆಗೆ ಸ್ವಲ್ಪ ಹೆಚ್ಚಿನ ಸಲುಗೆ ಬೆಳೆಸಿಕೊಂಡಿದ್ದ. ಈ ವಿಷಯ ಸೈಯದ್’ಗೆ ಗೊತ್ತಾಗಿ, ಅನುಮಾನದ ಪೆಡಂಭೂತ ತಲೆಗೆ ಹೊಗಿತ್ತು. ಹೇಗಾದರೂ ಮಾಡಿ ವಿಜಯಗೆ ತಕ್ಕಶಾಸ್ತಿ ಮಾಡಬೇಕೆಂದು ನಿರ್ಧಾರ ಮಾಡಿ, ಸಿಟ್ಟಿನ ಕೈಗೆ ಬುದ್ದಿ ಕೊಟ್ಟು ಪಾರ್ಟಿ ನೆಪದಲ್ಲಿ ಕಾರವಾರ ರಸ್ತೆಯ ರೈಲ್ವೆ ಮೈದಾನಕ್ಕೆ ವಿಜಯನನ್ನು ಕರೆಸಿದ್ದಾನೆ. ಆಗ ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದು ಸೈಯದ್ ಅಜರ್ ಅಜಯಗೆ ಕಲ್ಲು ಎತ್ತಿ ಹಾಕಿ ಕೊಲೆ ಗೈದು, ಬಳಿಕ ಪೆಟ್ರೋಲ್ ಸುರಿದು ಕೊಲೆಗೈದಿದ್ದಾನೆಂದು ಪೋಲಿಸರು ತಿಳಿಸಿದ್ದಾರೆ.
ಸದ್ಯ ವಿಶೇಷ ತಂಡ ರಚಿಸಿ ತನಿಖೆ ಕೈಗೆತ್ತಿಕೊಂಡ ಹಳೇಹುಬ್ಬಳ್ಳಿ ಠಾಣೆಯ ಪೋಲಿಸರು ಆರೋಪಿಯನ್ನು ಬಂಧಿಸಿ, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಪ್ರಾಣಕ್ಕಿಂತ ಹೆಚ್ಚು ಸ್ನೇಹಿತರ ನಡುವೆ ಅನೈತಿಕ ಸಂಬಂಧ ನಡುವೆ ಬಂಧು ಓರ್ವ ಸ್ನೇಹಿತನ ಪ್ರಾಣವನ್ನೇ ಇದೀಗ ಹಾರುವಂತೆ ಮಾಡಿದ್ದು ವಿಪರ್ಯಾಸವೇ ಸರಿ.