ಮಗ ಮಾಡಿದ ತಪ್ಪನ್ನ ಪ್ರಶ್ನೆ ಮಾಡಿದ ತಂದೆಗೆ ಮಗ ಕೊಟ್ಟ ಉತ್ತರ ನಿಜಕ್ಕೂ ಶಾಕಿಂಗ್. ಬೆಂಗಳೂರು ಉತ್ತರ ತಾಲೂಕಿನ ಭವಾನಿನಗರದಲ್ಲಿ ವಾಸವಿದ್ದ ,ಕೊಡಗು ಮೂಲದ ಬೆಂಗಳೂರು ನಿವಾಸಿ ವಿಶು ಉತ್ತಪ್ಪ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ತಂದೆ ರೇಷನ್ ತರಲು ಹೊರಗೆ ಹೋದಾಗ ಮನೆಯಲ್ಲಿದ್ದ ಗನ್ ತೆಗೆದುಕೊಂಡು ಕೈಯಲ್ಲಿ ಹಿಡಿದು ತಂದೆಗೆ ಫೋನ್ ಮಾಡಿ ಅಪ್ಪ ನಾನಿನ್ನು ಯಾವ ತಪ್ಪನ್ನು ಮಾಡುವುದಿಲ್ಲ ಎಂದವನೆ ಫೋನ್ ಕಟ್ ಮಾಡಿ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಕ್ಷಣ ಮನೆಗೆ ಬಂದ ತಂದೆಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗನನ್ನ ಕಂಡು ಗಾಬರಿಯಾಗಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.
ಆತ್ಮಹತ್ಯೆ ಮಾಡಿಕೊಂಡ ವಿಶು ಉತ್ತಪ್ಪ ತಂದೆ ತಮ್ಮಯ್ಯ ನೈಸ್ ಸಂಸ್ಥೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ತಂದೆಯ ಗನ್ ತೆಗೆದುಕೊಂಡು ಮಗ ಎದೆಗೆ ಶೂಟ್ ಮಾಡಿಕೊಂಡಿದ್ದಾನೆ. ಇನ್ನು ಮೃತ ವಿಶು ಉತ್ತಪ್ಪ ಪ್ರಥಮ ವರ್ಷದ ಬಿಇ ಓದುತ್ತಿದ್ದ. ಚೆನ್ನಾಗಿ ಓದುತ್ತಿದ್ದ ವಿದ್ಯಾರ್ಥಿ ಸಣ್ಣ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಮೃತನ ಸ್ನೇಹಿತರಲ್ಲಿ ಆಶ್ಚರ್ಯ ಉಂಟು ಮಾಡಿದೆ. ಕಾಲೇಜಿನಲ್ಲಿ ಸಹಪಾಠಿಗಳೊಂದಿಗೂ ಉತ್ತಮ ಒಡನಾಟವನ್ನ ಇಟ್ಟುಕೊಂಡಿದ್ದ ,ಸೌಮ್ಯ ಸ್ವಭಾವದ ಯುವಕ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲನಲ್ಲ ಎಂದು ಸಹಪಾಠಿಗಳು ಅಭಿಪ್ರಾಯ ಪಟ್ಟಿದ್ದಾರೆ. ದುಡುಕಿನ ನಿರ್ಧಾರದಿಂದ ನನ್ನ ಮಗ ಪ್ರಾಣ ಕಳೆದುಕೊಂಡ ಎಂದು ತಂದೆಯ ಆಕ್ರಂಧನ ಮುಗಿಲು ಮುಟ್ಟಿದೆ. ಘಟನೆ ಬಗ್ಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.