ಕೊಲೆ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪದ ಮೇಲೆ ಜೈಲಿನಲ್ಲಿರುವ ಶಾಸಕ ಮುನಿರತ್ನ ಪರ ಮಾತನಾಡುತ್ತಿರುವ ನಾಯಕರಿಗೆ ಮಾಜಿ ಸಂಸದ ಡಿ.ಕೆ.ಸುರೇಶ್ ಟಾಂಗ್ ಕೊಟ್ಟಿದ್ದಾರೆ. ಸಮುದಾಯ ಹಾಗೂ ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುವ ವ್ಯಕ್ತಿಯನ್ನು ನೀವು ಹೇಗೆ ಸಮರ್ಥನೆ ಮಾಡಿಕೊಳ್ಳುತ್ತೀರಿ ಎಂದು ಕೇಂದ್ರ ಸಚಿವ ಹೆಚ್’ಡಿ.ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಅಶೋಕ್ ಅವರಿಗೆ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಪ್ರಶ್ನಿಸಿದ್ದಾರೆ.ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮುನಿರತ್ನ ಮಾಡಿರುವ ಕೃತ್ಯವನ್ನು ಕಾಂಗ್ರೆಸ್ ಪಕ್ಷದ ನಾಯಕರೇನಾದರೂ ಮಾಡಿದ್ದರೆ ನಿಮ್ಮ ಮಾತುಗಳು ಯಾವ ರೀತಿ ಇರುತ್ತಿದ್ದವು? ಇದಕ್ಕೆ ರಾಜಕೀಯವನ್ನು ಬೆರೆಸಬೇಡಿ, ಸರಿಯಾಗಿ ಮಾತನಾಡಿ. ನಿಮ್ಮ ಪಕ್ಷ ಇದಕ್ಕೆ ಬೆಂಬಲವಾಗಿ ನಿಂತಿದ್ದೀಯೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದರು.ಕೆಲವು ನಾಯಕರು ಹಾಗೂ ವಿರೋಧ ಪಕ್ಷದ ನಾಯಕರು ಇದಕ್ಕೆ ರಾಜಕೀಯ ಬಣ್ಣ ಬಳಿಯಲು ಯತ್ನಿಸುತ್ತಿದ್ದಾರೆ, ಸಾಕ್ಷ್ಯಾಧಾರಗಳು ಸ್ಪಷ್ಟವಾಗಿರುವಾಗ ಹೀಗೆ ಮಾಡುವುದು ಸರಿಯೇ? ಮಹಿಳೆಯರ ವಿರುದ್ಧದ ಅವರ ನಿಂದನೆ ಸ್ವೀಕಾರಾರ್ಹವಲ್ಲ, ಹಾಗೆಯೇ ಒಕ್ಕಲಿಗ ಸಮುದಾಯದ ವಿರುದ್ಧ ಅವರ ಮಾತುಗಳು ಸ್ವೀಕಾರಾರ್ಹವಲ್ಲ ಎಂದು ಹೇಳಿದರು.