ರಾಜ್ಯ ಕಾಂಗ್ರೆಸ್ ಸರ್ಕಾರ ಬಸ್ ಪ್ರಯಾಣ ದರವನ್ನು ಶೇಕಡಾ 15ರಷ್ಟು ಹೆಚ್ಚಳ ಮಾಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು, “ಅಧಿಕಾರಕ್ಕೆ ಬಂದಾಗಿನಿಂದ ಈ ಸರ್ಕಾರ ಜನರ ಮೇಲೆ ಬರೆ ಎಳೆಯುವುದು, ಅದನ್ನು ಜನರೂ ಭರಿಸಿಕೊಂಡು ಹೋಗುವುದು ಮಾಮೂಲಿ ಆಗಿಬಿಟ್ಟಿದೆ ” ಎಂದು ಹರಿಹಾಯ್ದರು.
ಯಾವುದೇ ಮಂತ್ರಿ, ಶಾಸಕರ ಮಕ್ಕಳು ಸರ್ಕಾರಿ ಬಸ್‌ನಲ್ಲಿ ಓಡಾಡುವುದಿಲ್ಲ. ಓಡಾಡುವವರೆಲ್ಲಾ ಜನಸಾಮಾನ್ಯರು. ಸಾರಿಗೆ ದರ ಏರಿಕೆ ಜನಸಾಮನ್ಯರಿಗೆ ಹೊರಯಾಗಲಿದೆ.
ಬಸ್ ಟಿಕೆಟ್ ದರ ಏರಿಕೆ ಕುರಿತು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಗ್ಯಾರಂಟಿಯನ್ನ ನಿಲ್ಲಿಸಲು ಕಾರಣ ಹುಡುಕುತ್ತಿದೆ. ಹೇಗಾದರು ಮಾಡಿ ಗ್ಯಾರಂಟಿ ನಿಲ್ಲಿಸಲು ನೆಪ ಹುಡುಕುತ್ತಿದ್ದಾರೆ. ಯಾವುದೇ ಕಾರಣಕ್ಕೂ 5 ಗ್ಯಾರಂಟಿ ನಿಲ್ಲಿಸಬೇಡಿ. ಸಾಕಷ್ಟು ಜನರಿಗೆ ಇದರಿಂದ ಅನುಕೂಲ ಆಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಅವರಿಂದಲೇ ಕಿತ್ತು ಅವರಿಗೆ ಕೊಡುವ ಕೆಲಸವನ್ನ ಸರ್ಕಾರ ಮಾಡಬಾರದು. ಮಧ್ಯಮ ವರ್ಗದ ಜನರ ಬದುಕಿನ ಜೊತೆ ರಾಜ್ಯ ಸರ್ಕಾರ ಚೆಲ್ಲಾಟವಾಡುತ್ತಿದೆ.
ಅತ್ತೆದನ್ನ ಅಳಿಯ ದಾನ ಮಾಡಿದ ಅನ್ನೋ ಮಾತಿನಂತೆ ಅವರಿಂದ ಕಿತ್ತು ಅವರಿಗೆ ಕೊಡೊಕೆ ಇವರೇ ಆಗಬೇಕಾ? ಬಸ್‌ನಲ್ಲಿ ಓಡಾಡುವವರೆಲ್ಲಾ ಜನಸಾಮಾನ್ಯರು. ದಿನಕ್ಕೆ 10 ರೂ. ಹೆಚ್ಚಿಗೆಯಾದರೂ ಅದು ಅವರಿಗೆ ಹೊರೆಯಾಗಲಿದೆ ಎಂದು ವಾಗ್ದಾಳಿ ನಡೆಸಿದರು.