ಬೆಂಗಳೂರು:ಎನ್‌ಡಿಎ ಮೈತ್ರಿಕೂಟದಲ್ಲಿ ಚನ್ನಪಟ್ಟಣ ಟಿಕೆಟ್ ಕಗ್ಗಂಟು ದಿನದಿಂದ ದಿನಕ್ಕೆ ಬಿಗಿಯಾಗುತ್ತಿದೆ. ನಿನ್ನೆಯೂ ಮೈತ್ರಿ ಸಭೆ ಮಾಡಿದ್ದು, ಯಾವುದೇ ಫೈನಲ್ ಆಗಿಲ್ಲ. ಹೀಗಾಗಿ ಜೆಡಿಎಸ್ ಚಿಹ್ನೆಯಿಂದ ಯೋಗೇಶ್ವರ್ ಕಣಕ್ಕಿಳಿಸಲು ದಳಪತಿಗಳು ನಿರ್ಧಾರ ಮಾಡಿದ್ದಾರೆ ಎನ್ನಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಗೆಲ್ಲುವ ದೃಷ್ಟಿಯಿಂದ ಬಿಜೆಪಿಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಬಿಟ್ಟುಕೊಟ್ಟಿದ್ದೇವೆ. ನಮ್ಮ ಕುಟುಂಬದವರನ್ನೇ ಬಿಜೆಪಿ ಅಭ್ಯರ್ಥಿಯಾಗಿ ನಿಲ್ಲಿಸಿದ್ದೇವೆ. ಆ ರೀತಿ ಔದಾರ್ಯ ಅವರ ಕಡೆಯಿಂದಲೂ ಬರಬೇಕು ಎಂದಿದ್ದಾರೆ. ಆ ಮೂಲಕ ಪರೋಕ್ಷವಾಗಿ ಜೆಡಿಎಸ್ನಿಂದಲೇ ಸ್ಪರ್ಧಿಸುವಂತೆ ಯೋಗೇಶ್ವರ್ಗೆ ಆಫರ್ ನೀಡಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಜಿಲ್ಲೆಯ ಪಾಂಡವಪುರ ತಾಲೂಕಿನ ಸೀತಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೆಹಲಿ ಮಟ್ಟದಲ್ಲಿ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಸಮಸ್ಯೆಯಿಲ್ಲ ಎಂದು ತಿಳಿಸಿದರು.
ಕಳೆದ ಎರಡು ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ನಾನು ಪ್ರತಿನಿಧಿಸಿದ್ದೇನೆ. ಚನ್ನಪಟ್ಟಣ ಜೆಡಿಎಸ್ ಕ್ಷೇತ್ರ ಅನ್ನೋದು ದೆಹಲಿಯ ಮಟ್ಟದಲ್ಲಿ ಇದೆ. ಉಪಚುನಾವಣೆಯ 3 ಕ್ಷೇತ್ರ ಪೈಕಿ ಜೆಡಿಎಸ್ ಕಾರ್ಯಕರ್ತರ ಪಡೆ ಇದೆ ಎಂದಿದ್ದಾರೆ.
ಸಿ.ಪಿ.ಯೋಗೇಶ್ವರ್ ನಾಮಪತ್ರ ಸಲ್ಲಿಸುವ ಬಗ್ಗೆ ಚರ್ಚೆಯಾಗಿಲ್ಲ. ಆ ಬಗ್ಗೆ ನನಗೆ ಗೊತ್ತಿಲ್ಲ. ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗ್ತಾರೆಂಬ ವಿಚಾರ 15 ದಿನದಿಂದ ಓಡಾಡುತ್ತಿದೆ. ಕಾಂಗ್ರೆಸ್ನವರು ತಮ್ಮ ಪಕ್ಷಕ್ಕೆ ಕರೆದೊಯ್ದು ನಿಲ್ಲಿಸಲು ಕಾಯುತ್ತಿದ್ದಾರೆ. ನಮ್ಮಲ್ಲಿ ಒಡಕು ಮೂಡಲಿ ಎಂದು ಭಕಪಕ್ಷಿಯಂತೆ ಕಾಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ನವರು ಸ್ವತಂತ್ರವಾಗಿ ಗೆಲ್ಲಲು ಸಾಧ್ಯವಿಲ್ಲ. ಅದಕ್ಕಾಗಿ ನಮ್ಮಲ್ಲಿ ಒಡಕು ತರಲು ಕಾಂಗ್ರೆಸ್ನವರು ಶ್ರಮಿಸ್ತಿದ್ದಾರೆ. ಅಂತಹ ಅವಕಾಶ ಕಲ್ಪಿಸಬಾರದು ಎಂದು ತಾಳ್ಮೆಯಿಂದ ಇದ್ದೇನೆ. ಇನ್ನೂ 4 ದಿನ ಕಾಲಾವಕಾಶವಿದೆ, ಕೂತು ಚರ್ಚೆ ಮಾಡುತ್ತೇವೆ. ಮಂಗಳವಾರ ಅಥವಾ ಬುಧವಾರ ಅಭ್ಯರ್ಥಿ ಫೈನಲ್ ಆಗಲಿದೆ ಎಂದಿದ್ದಾರೆ.