ಬೆಂಗಳೂರು: ಬಿಜೆಪಿ- ಜೆಡಿಎಸ್ ಜಂಟಿಯಾಗಿ ಇದೇ 3ರಿಂದ ಮೈಸೂರು ಚಲೋ ಪಾದಯಾತ್ರೆ ನಡೆಸಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ದೆಹಲಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಎರಡೂ ಪಕ್ಷಗಳ ಸಂಸದರು, ಶಾಸಕರು ಭಾಗವಹಿಸುತ್ತಾರೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಹಿರಿಯರಾದ ಬಿ.ಎಸ್.ಯಡಿಯೂರಪ್ಪ ಅವರು ಪಾದಯಾತ್ರೆಗೆ ಚಾಲನೆ ಕೊಡಲಿದ್ದಾರೆ ಎಂದು ನುಡಿದರು. ಭ್ರಷ್ಟ, ಹಗರಣಗಳ ಕಾಂಗ್ರೆಸ್ ಸರಕಾರದ ವಿರುದ್ಧ ಜನಾಂದೋಲನ ಇದಾಗಿರಲಿದೆ. ಇದನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತೇವೆ ಎಂದು ಹೇಳಿದರು.
ವಾಲ್ಮೀಕಿ ನಿಗಮದ ಹಗರಣ ಮತ್ತು ಮುಡಾ ಹಗರಣವನ್ನು ಮುಂದಿಟ್ಟು ಬಿಜೆಪಿ ಮತ್ತು ಜೆಡಿಎಸ್ ಸದನದಲ್ಲಿ ಒಟ್ಟಾಗಿ ಹೋರಾಟ ಮಾಡಿದ್ದೆವು. ಸದನ ಮುಗಿದ ಬಳಿಕ ಈ ಹೋರಾಟ ಮುಂದುವರೆಸಲು ನಿರ್ಧರಿಸಲಾಗಿತ್ತು. ನಮ್ಮ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್‌ದಾಸ್ ಅಗರ್‌ವಾಲ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ನಾವೆಲ್ಲರೂ ಕುಳಿತು ಚರ್ಚಿಸಿದ್ದೇವೆ. ಎಲ್ಲವೂ ಇತ್ಯರ್ಥ ಆಗಿದೆ. ಮುಂದಿನ ಶನಿವಾರ ಬೆಳಿಗ್ಗೆ 8.30ಕ್ಕೆ ನೈಸ್ ರಸ್ತೆ ಜಂಕ್ಷನ್‌ನಿAದ ಪಾದಯಾತ್ರೆ ಹೊರಡಲಿದೆ ಎಂದು ಪ್ರಕಟಿಸಿದರು.
ಅಹಿಂದ ಹೆಸರು ಹೇಳಿಕೊಂಡು ಅಧಿಕಾರ ಪಡೆದ ರಾಜ್ಯದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಭ್ರಷ್ಟಾಚಾರದಲ್ಲಿ ಮುಳುಗಿದ ಬಗ್ಗೆ ಕರ್ನಾಟಕ ಮಾತ್ರವಲ್ಲದೆ, ದೇಶಾದ್ಯಂತ ಚರ್ಚೆ ಆಗುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣದಡಿ ಪರಿಶಿಷ್ಟ ಪಂಗಡಗಳ ಹಣವನ್ನು ಕಾಂಗ್ರೆಸ್ ಸರಕಾರ ದೋಚಿತ್ತು ಎಂದು ಟೀಕಿಸಿದರು.
ಸ್ವತಃ ಮುಖ್ಯಮಂತ್ರಿಗಳೇ ಸದನದಲ್ಲಿ ಇದನ್ನು ಒಪ್ಪಿಕೊಂಡಿದ್ದಾರೆ. ಮತ್ತೊಂದೆಡೆ ಮುಡಾದಲ್ಲಿ ಮುಖ್ಯಮಂತ್ರಿಗಳ ಕುಟುಂಬಕ್ಕೆ ಅಕ್ರಮವಾಗಿ ಬಂದ 14 ನಿವೇಶನಗಳ ಜೊತೆಗೇ 4 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಸಾವಿರಾರು ನಿವೇಶನಗಳನ್ನು ಕಾಂಗ್ರೆಸ್ ಸರಕಾರ ಬಂದ ಬಳಿಕ ಬೇಕಾದವರಿಗೆ ಕೊಟ್ಟದ್ದು ಪ್ರಮುಖ ಅಂಶ ಎಂದು ವಿವರಿಸಿದರು.
ಇದರಿಂದ ಮುಡಾಗೆ 4 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿದೆ. ಬಡವರು, ಪರಿಶಿಷ್ಟ ಸಮುದಾಯಕ್ಕೆ ಸಿಗಬೇಕಾದ ನಿವೇಶನಗಳನ್ನು ಇವರ ಹಿಂಬಾಲಕರಿಗೆ, ರಿಯಲ್ ಎಸ್ಟೇಟ್ ದಂಧೆಗೆ ಕೊಡಲಾಗಿದೆ ಎಂದು ಆಕ್ಷೇಪಿಸಿದರು.

ಜನರೂ ಪಾಲ್ಗೊಳ್ಳಲು ವಿನಂತಿ- ರಾಧಾಮೋಹನ್‌ದಾಸ್ ಅಗರ್‌ವಾಲ್
ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್‌ದಾಸ್ ಅಗರ್‌ವಾಲ್ ಅವರು ಮಾತನಾಡಿ, ಬಿಜೆಪಿ- ಜೆಡಿಎಸ್ ಜಂಟಿಯಾಗಿ ಈ ಪಾದಯಾತ್ರೆ ನಡೆಸಲಿವೆ. ಎರಡೂ ಪಕ್ಷಗಳ ಜನಪ್ರತಿನಿಧಿಗಳು, ಕಾರ್ಯಕರ್ತರು ಅತ್ಯಂತ ಉತ್ಸಾಹದಿಂದ ಭಾಗವಹಿಸುತ್ತಾರೆ ಎಂದು ತಿಳಿಸಿದರು.
ಬಿಜೆಪಿ- ಜೆಡಿಎಸ್ ನಡುವೆ ಯಾವುದೇ ಗೊಂದಲಗಳಿಲ್ಲ. ನಮ್ಮ ರಾಜ್ಯಾಧ್ಯಕ್ಷ ವಿಜಯೇಂದ್ರ- ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ನೇತೃತ್ವ, ಮುಖಂಡರ ಭಾಗವಹಿಸುವಿಕೆಯೊಂದಿಗೆ ಯಾತ್ರೆ ನಡೆಯಲಿದೆ. ಯಾವುದೇ ವ್ಯಕ್ತಿಗೆ ಇಲ್ಲಿ ಮಹತ್ವ ಇಲ್ಲ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಜನರೂ ಈ ಯಾತ್ರೆಯಲ್ಲಿ ಪಾಲ್ಗೊಳ್ಳಲು ವಿನಂತಿಸಿದ್ದೇವೆ ಎಂದರು.
ಮುಡಾದಲ್ಲಿ ಸುಮಾರು 4 ಸಾವಿರ ಕೋಟಿಯ ಹಗರಣ ನಡೆದಿದೆ. ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ಆದ ಕುರಿತು ಮುಖ್ಯಮಂತ್ರಿಯೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಈ ವಿಷಯದಲ್ಲಿ ನಾಗರಿಕರಲ್ಲಿ ಆಕ್ರೋಶವಿದೆ. ಅದು ಯಾವುದೇ ಕ್ಷಣದಲ್ಲಿ ಸ್ಫೋಟವಾಗಬಹುದು ಎಂದು ಎಚ್ಚರಿಸಿದರು.

ನಿರಂತರ ಭ್ರಷ್ಟಾಚಾರದಲ್ಲಿ ತೊಡಗಿದ ಸರಕಾರ- ಪ್ರಲ್ಹಾದ್ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಮಾತನಾಡಿ, ಕರ್ನಾಟಕ ಸರಕಾರವು ನಿರಂತರ ಭ್ರಷ್ಟಾಚಾರದಲ್ಲಿ ತೊಡಗಿದೆ. ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣ ನಡೆದಿದ್ದು, ಮುಡಾದಲ್ಲಿ ಹಗರಣ ಆಗಿಲ್ಲವೆಂದು ಕಾಂಗ್ರೆಸ್ಸಿನವರು ನಿರ್ಲಜ್ಜರಾಗಿ ಸಮರ್ಥಿಸುತ್ತಿದ್ದಾರೆ ಎಂದು ಟೀಕಿಸಿದರು.
ಕುಮಾರಸ್ವಾಮಿಯವರ ಜೊತೆ ಸಭೆ ನಡೆಸಿದ್ದು, ಗೊಂದಲ ಬಗೆಹರಿದಿದೆ. ನಿಗದಿಯಂತೆ ಎರಡೂ ಪಕ್ಷಗಳ ನೇತೃತ್ವದಲ್ಲಿ ಅರ್ಥಾತ್ ಎನ್‌ಡಿಎ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ. ಎರಡೂ ಪಕ್ಷಗಳ ನಾಯಕರು, ಕಾರ್ಯಕರ್ತರು ಪಾಲ್ಗೊಳ್ಳುತ್ತಾರೆ ಎಂದರು.

 

Leave a Reply

Your email address will not be published. Required fields are marked *

Verified by MonsterInsights