Top Newsಸುದ್ದಿ

ವರ್ಷದ ಬಳಿಕ ತೆರೆದ ಹಾಸನಾಂಬೆ ದೇಗುಲ ಬಾಗಿಲು

ಹಾಸನ: ನಗರದದ ಅದಿದೇವತೆ ಹಾಗೂ ವರ್ಷಕ್ಕೊಮ್ಮೆಯಷ್ಟೇ ದರ್ಶನ ಭಾಗ್ಯ ಕರುಣಿಸುವ ಹಾಸನಾಂಬೆಯ ಗರ್ಭಗುಡಿ ಬಾಗಿಲು ಗುರುವಾರ ಮಧ್ಯಾಹ್ನ 12.10ಕ್ಕೆ ಶಾಸ್ರೋಕ್ತವಾಗಿ ತೆರೆಯಿತು. ಈ ವೇಳೆ ಹಾಜರಿದ್ದ ಸಾವಿರಾರು ಭಕ್ತರು, ಉಪೇ… ಉಪೇ… ಹಾಸನಾಂಬೆ, ಲೋಕಮಾತೆ, ಜಗನ್ಮಾತೆ ಎಂದೆಲ್ಲಾ ಜಯಘೋಷ ಮೊಳಗಿಸಿದರು.

ಮೈಸೂರು ಅರಸು ವಂಶಸ್ಥ ನಂಜರಾಜ ಅರಸ್ ಅವರು ಗೊನೆಕಟ್ಟಿದ್ದ ಬಾಳೆಕಂಬ ಕಡಿದ ಕೂಡಲೇ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಾಯಿತು. ದೇವಿಯ ಗರ್ಭಗುಡಿ ಬಾಗಿಲು ತೆರೆದಾಗ ಕಳೆದ ವರ್ಷ ಬಾಗಿಲು ಮುಚ್ಚುವ ವೇಳೆ ಹಚ್ಚಿಟ್ಟಿದ್ದ ಹಣತೆ ಹಾಗೆಯೇ ಉರಿಯುತ್ತಿತ್ತು. ಹೂವು ಬಾಡಿರಲಿಲ್ಲ. ನೈವೇದ್ಯ ತಾಜಾರೂಪದಲ್ಲೇ ಇತ್ತು. ಈ ಅಪರೂಪದ ದೃಶ್ಯವನ್ನು ನೆರೆದಿದ್ದ ಪ್ರತಿಯೊಬ್ಬರೂ ಕಣ್ಣುಂಬಿಕೊಂಡು ಭಕ್ತಿ ಪರವಶರಾದರು.

ಈ ಅಪರೂಪದ ಸನ್ನಿವೇಶಕ್ಕೆ ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಹಾಸನ ಆದಿಚುಂಚನಗಿರಿ ಮಠದ ಶಂಭುನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಸಂಸದ ಶ್ರೇಯಸ್ ಪಟೇಲ್, ಸ್ಥಳೀಯ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್, ಅರಸೀಕೆರೆ ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ, ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

ನ.2 ರವರೆಗೆ ಹಾಸನವನ್ನು ಇಡೀ ಪ್ರಪಂಚ ನೋಡಲಿದೆ. ಮಹಾಲಕ್ಷ್ಮಿ, ಕಾಳಿ, ಸರಸ್ವತಿ ರೂಪದಲ್ಲಿ ಹಾಸನಾಂಬೆ ಇಲ್ಲಿ ನೆಲೆಸಿರುವ ಪವಿತ್ರ ಕ್ಷೇತ್ರ ಇದು. ಸರಸ್ವತಿ ಜ್ಞಾನದ ಶಕ್ತಿಯಾದರೆ, ಕಾಳಿ ಕ್ರಿಯಾಶಕ್ತಿ, ಲಕ್ಷ್ಮಿ ಸಂಪತ್ತಿನ ಸಂಕೇತ. ಈ ಮೂವರ ಆಶೀರ್ವಾದ ಸಿಕ್ಕರೆ ವ್ಯಕ್ತಿ ಎಲ್ಲ ರೀತಿಯಲ್ಲೂ ಪ್ರವರ್ಧಮಾನಕ್ಕೆ ಬರುತ್ತಾರೆ.

Comments (0)

Your email address will not be published. Required fields are marked *

Back to top button