ನವದೆಹಲಿ: ಹರ್ಯಾಣ ಮತ್ತು ಜಮ್ಮು-ಕಾಶ್ಮೀರ ಚುನಾವಣೆಗೆ ಮುನ್ನ ಕೇಂದ್ರ ಸಚಿವ ಸಂಪುಟ ರೈತರಿಗೆ ಅನುಕೂಲವಾಗುವ ಒಟ್ಟು 14,235.30 ಕೋಟಿ ರೂಪಾಯಿಗಳ ಏಳು ಹೊಸ ಯೋಜನೆಗಳಿಗೆ ಅನುಮೋದನೆ ನೀಡಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಚುನಾವಣೆ ನಡೆಯಲಿರುವ ಮಹಾರಾಷ್ಟ್ರಕ್ಕೆ ಸಂಬಂಧಿಸಿದಂತೆ, ಕೇಂದ್ರ ಸಚಿವ ಸಂಪುಟವು ಮುಂಬೈನ ಮಲಾಡ್ ಮತ್ತು ಇಂದೋರ್ ನಡುವೆ 18,036 ಕೋಟಿ ರೂಪಾಯಿ ವೆಚ್ಚದಲ್ಲಿ 309 ಕಿಮೀ ವ್ಯಾಪ್ತಿಯ ಹೊಸ ರೈಲು ಮಾರ್ಗವನ್ನು ಅನುಮೋದಿಸಿದೆ.
ಗುಜರಾತ್‌ನ ಸನಂದ್‌ನಲ್ಲಿ ಸೆಮಿಕಂಡಕ್ಟರ್ ಘಟಕವನ್ನು ಸ್ಥಾಪಿಸಲು ಕೇನ್ಸ್ ಸೆಮಿಕಾನ್ ಪ್ರೈವೇಟ್ ಲಿಮಿಟೆಡ್‌ನ ಪ್ರಸ್ತಾವನೆಯನ್ನು ಕೇಂದ್ರವು ಅನುಮೋದಿಸಿದೆ. ಡಿಜಿಟಲ್ ಅಗ್ರಿಕಲ್ಚರ್ ಮಿಷನ್, ಆಹಾರ ಮತ್ತು ಪೌಷ್ಠಿಕ ಭದ್ರತೆಗಾಗಿ ಬೆಳೆ ವಿಜ್ಞಾನ, ಕೃಷಿ ಶಿಕ್ಷಣ, ನಿರ್ವಹಣೆ ಮತ್ತು ಸಾಮಾಜಿಕ ವಿಜ್ಞಾನಗಳನ್ನು ಬಲಪಡಿಸುವುದು, ಸುಸ್ಥಿರ ಜಾನುವಾರು ಆರೋಗ್ಯ ಮತ್ತು ಉತ್ಪಾದನೆ, ತೋಟಗಾರಿಕೆಯ ಸುಸ್ಥಿರ ಅಭಿವೃದ್ಧಿ, ಕೃಷಿ ವಿಜ್ಞಾನ ಕೇಂದ್ರದ ಬಲವರ್ಧನೆ ಮತ್ತು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಇವೇ ರೈತರ ಪರವಾಗಿರುವ 7 ಯೋಜನೆಗಳಾಗಿವೆ.