ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಸಾಲು ಸಾಲು ರಜೆ ಹಿನ್ನೆಲೆ ತಮ್ಮ ಊರುಗಳಿಗೆ ತೆರಳಿದ್ದ ಜನ, ರಜೆ ಮುಗಿಸಿ ಮತ್ತೆ ಬೆಂಗಳೂರನತ್ತ ವಾಪಸ್ ಆಗುತ್ತಿದ್ದಾರೆ. ಈ ಹಿನ್ನೆಲೆ ನಗರದ ವಿವಿಧೆಡೆ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದೆ.
ಬೆಂಗಳೂರು-ತುಮಕೂರು ರಸ್ತೆ, ಕೆ.ಆರ್ ಪುರಂ ಮುಖ್ಯರಸ್ತೆ ಹಾಗೂ ಗೊರಗುಂಟೆಪಾಳ್ಯದಿಂದ ಗೋವರ್ಧನ್ ವೃತ್ತದ ವರೆಗೂ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ಭಾನುವಾರ ತಡರಾತ್ರಿಯಿಂದಲೇ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದ್ದು, ಇದರಿಂದ ಅನ್ಯಜಿಲ್ಲೆಯ ಉದ್ಯೋಗಿಗಳು ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ.
ದೀಪಾವಳಿ ರಜೆ ಮುಗಿಸಿ ಬೆಂಗಳೂರಿನತ್ತ ಜನ ದಾಂಗುಡಿ ಇಡುತ್ತಿದ್ದಾರೆ. ಹೀಗಾಗಿ ತುಮಕೂರು ರಸ್ತೆಯಲ್ಲಿ ಜನರಿಗೆ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ. ಟ್ರಾಫಿಕ್‌ಗೆ ಬೇಸತ್ತು ನಾಗಸಂಧ್ರ ಮೆಟ್ರೋ ನಿಲ್ದಾಣದ ಬಳಿ ಇಳಿದು ಜನ ಮೆಟ್ರೋ ಸಂಚಾರದ ಮೊರೆ ಹೋಗುತ್ತಿದ್ದಾರೆ. ಈ ಹಿನ್ನಲೆ ನಾಗಸಂಧ್ರ ಮೆಟ್ರೋ ನಿಲ್ದಾಣ ಫುಲ್ ರಶ್ ಆಗಿದೆ.
ನಗರದ ಗೊರಗುಂಟೆಪಾಳ್ಯದ ಬಳಿಯೂ ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದೆ. ಗೊರಗುಂಟೆಪಾಳ್ಯದಿಂದ ಗೋವರ್ಧನ್ ವೃತ್ತದ ವರೆಗೆ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದ ಬೆಂಗಳೂರು ನಗರ ಪ್ರವೇಶಿಸುವಷ್ಟರಲ್ಲಿ ಜನ ಹೈರಾಣಾಗುತ್ತಿದ್ದಾರೆ.