ಕಾರವಾರ: ಚೀನಾದ ಜಿಪಿಎಸ್ ಟ್ರ್ಯಾಕರ್ ಹೊಂದಿರುವ ಸೀಗಲ್ ಪಕ್ಷಿ ಒಂದು ಕದಂಬ ನೌಕಾನೆಲೆ ಪ್ರದೇಶದಲ್ಲಿ ಮಂಗಳವಾರ ಕಾಣಿಸಿಕೊಂಡಿದೆ. ಇದರಿಂದ ನೌಕಾನೆಲೆಯ ಬಗ್ಗೆ ಚೀನಾ ಗೂಢಚರ್ಯೆ ನಡೆಸುತ್ತಿದೆಯೇ ಅನ್ನೋ ಶಂಕೆ ವ್ಯಕ್ತವಾಗಿದ್ದು, ಜನರ ಆತಂಕಕ್ಕೂ ಕಾರಣವಾಗಿದೆ. ಟ್ರ್ಯಾಕರ್ ಹೊಂದಿದ್ದ ಸೀಗಲ್ ಹಕ್ಕಿಯನ್ನು ಅರಣ್ಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ನೋಡಲು ಭಿನ್ನವಾಗಿ ಕಂಡ ಈ ಹಕ್ಕಿಯನ್ನ ನೋಡಿದ ಸ್ಥಳೀಯರು ಅರಣ್ಯ ಇಲಾಖೆಯ ಮರೈನ್ ವಿಭಾಗದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಅಧಿಕಾರಿಗಳು ಹಕ್ಕಿಯನ್ನ ಹಿಡಿದು ಪರಿಶೀಲಿಸಿದ್ದಾರೆ. ಸೀಗಲ್ನ ಬೆನ್ನಿನಲ್ಲಿದ್ದ ಜಿಪಿಎಸ್ನಲ್ಲಿ ಚೈನೀಸ್ ವಿಜ್ಞಾನ ಅಕಾಡೆಮಿಯ ರಿಸರ್ಚ್ ಸೆಂಟರ್ ಫಾರ್ ಇಕೋ-ಎನ್ವಿರಾನ್ಮೆಂಟಲ್ ಸೈನ್ಸ್ ವಿಳಾಸ ಪತ್ತೆಯಾಗಿದೆ. ಸೀಗಲ್ ಹಕ್ಕಿಗಳ ಚಲನ ವಲನ, ಆಹಾರ ಹಾಗೂ ವಲಸೆಯನ್ನು ಗುರುತಿಸಲು ಜಿಪಿಎಸ್ ಟ್ರ್ಯಾಕರ್ ಬಳಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸದ್ಯ ಅಧಿಕಾರಿಗಳು ಅಕಾಡೆಮಿಯ ಸಂಪರ್ಕಕ್ಕೆ ಪ್ರಯತ್ನಿಸುತ್ತಿದ್ದು, ಹಕ್ಕಿಯನ್ನು ಮರೈನ್ ಅರಣ್ಯ ವಿಭಾಗದ ಕಚೇರಿಯಲ್ಲಿ ಇರಿಸಲಾಗಿದೆ. ಕಳೆದ ವರ್ಷ ನವಂಬರ್ನಲ್ಲೂ ಕಾರವಾರ ಬೈತಕೋಲ್ ಬಂದರಿನ ಸರಹದ್ದು ವ್ಯಾಪ್ತಿಯಲ್ಲಿ ಟ್ರ್ಯಾಕರ್ ಅಳವಡಿಸಿದ ರಣ ಹದ್ದು ಪ್ರತ್ಯಕ್ಷಗಿತ್ತು. ಅದು ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ಇದು ಸಹ ಇವುಗಳ ಅಧ್ಯಯನಕ್ಕೆ ಬಳಕೆ ಮಾಡಿರುವುದು ತಿಳಿದುಬಂದಿತ್ತು. ಆದರೇ ಅಧ್ಯಯನದ ನೆಪದಲ್ಲಿ ಕಾರವಾರ ಭಾಗದಲ್ಲಿ ಇರುವ ಕದಂಬ ನೌಕಾನೆಲೆಯ ರಹಸ್ಯ ಸೋರಿಕೆಯ ಆತಂಕ ಕಾಡುತ್ತಿದೆ. ಇದೀಗ ಸಿಕ್ಕಿರುವ ಸೀಗಲ್ ಟ್ರ್ಯಾಕರ್ ಚೀನಾದ್ದು ಎಂದು ತಿಳಿದಿದೆ.


