ಬೆಂಗಳೂರು: ಹೆಚ್‌ಎಮ್‌ಟಿ ಸಂಸ್ಥೆಯನ್ನು ಪುನಶ್ಚೇತನಗೊಳಿಸಲು ಮುಂದಾಗಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಇಂದು ಹೆಚ್‌ಎಮ್‌ಟಿ ವಾಚ್ ಗಿಫ್ಟ್ ನೀಡಿದ್ದಾರೆ. ಗೌರಿ ಹಬ್ಬದ ಹಿನ್ನಲೆಯಲ್ಲಿ ಪುತ್ರ ನಿಖಿಲ್‌ಗೆ ಸ್ವತಃ ಕುಮಾರಸ್ವಾಮಿ ಹೆಚ್‌ಎಮ್‌ಟಿ ವಾಚ್ ಖರೀದಿ ಮಾಡಿ ಹಬ್ಬದ ಉಡುಗೊರೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹೆಚ್‌ಎಮ್‌ಟಿ ವಾಚ್ ಕುರಿತು ಮಾಹಿತಿ ನೀಡಿದ ನಿಖಿಲ್ ಕುಮಾರಸ್ವಾಮಿ, ಜನರು ಹೆಚ್‌ಎಮ್‌ಟಿ ವಾಚ್ ಬಳಕೆ ಮಾಡುವಂತೆ ಕರೆ ನೀಡಿದ್ದಾರೆ. ಹೆಚ್‌ಎಮ್‌ಟಿ ಕೈಗಡಿಯಾರ ಒಂದು ಕಾಲದಲ್ಲಿ ಭಾರತದ ಹೃದಯ ಬಡಿತವಾಗಿತ್ತು. ಎಲ್ಲರ ಪಾಲಿಗೂ ಅದು ನಿತ್ಯನಾಡಿಯಾಗಿತ್ತು.

ನಮ್ಮ ತಲೆಮಾರಿನ ಯುವಜನರಿಗೆ ಹೆಚ್‌ಎಮ್‌ಟಿ ವಾಚ್ ಎಂದರೆ ಅದೊಂದು ದಂತಕಥೆ. ನನ್ನ ಪೂಜ್ಯ ತಂದೆಯವರು ಹಾಗೂ ಕೇಂದ್ರ ಸರಕಾರದ ಭಾರೀ ಕೈಗಾರಿಕೆ, ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಗೌರಿಹಬ್ಬದ ದಿನವಾದ ಇಂದು ಹೆಚ್‌ಎಮ್‌ಟಿ ಕೈಗಡಿಯಾರ ಖರೀದಿಸಿ ನನ್ನ ಕೈಗೆ ಕಟ್ಟಿದ್ದಾರೆ. ಈ ಸಂದರ್ಭದಲ್ಲಿ ಹೆಚ್‌ಎಮ್‌ಟಿ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕರಾದ ರಾಜೇಶ್ ಕೊಹ್ಲಿ ಇನ್ನಿತರೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಯುವ ಜನರು ನಮ್ಮ ನಾಡಿನ ಹೆಮ್ಮೆಯ ಪ್ರತೀಕವಾದ ಹೆಚ್‌ಎಮ್‌ಟಿ ಕೈಗಡಿಯಾರಗಳನ್ನೇ ಕಟ್ಟಬೇಕು ಎಂಬುದು ನನ್ನ ವಿನಂತಿ. ನಾನು ಹೆಚ್‌ಎಮ್‌ಟಿ ಕೈಗಡಿಯಾರ ಕಟ್ಟಿದ್ದೇನೆ, ನೀವೂ ಕಟ್ಟಿಕೊಳ್ಳಿ. ನಮ್ಮ ಹೆಚ್‌ಎಮ್‌ಟಿ ನಮ್ಮ ಹೆಮ್ಮೆ ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.

By Veeresh

Leave a Reply

Your email address will not be published. Required fields are marked *

Verified by MonsterInsights