ಇತ್ತೀಚೆಗೆ ರಾಯಚೂರಿನಲ್ಲಿ ವೈದ್ಯರು ಔಷಧಿ ಚೀಟಿಗಳನ್ನು ಕನ್ನಡದಲ್ಲಿ ಬರೆದು ಭಾಷೆಯ ಬೆಳವಣಿಗೆಗೆ ಸಹಕರಿಸಬೇಕೆಂದು ನೀಡಿದ ಕರೆಗೆ ನೂರಾರು ಕನ್ನಡಪ್ರಿಯ ವೈದ್ಯರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿರುವುದು ಭಾಷೆಯ ಬೆಳವಣಿಗೆಯ ದೃಷ್ಠಿಯಿಂದ ಚೇತೋಹಾರಿಯಾದ ಸಂಗತಿಯಾಗಿದೆ. ಹಾಗಾಗಿ ಸರ್ಕಾರಿ ವೈದ್ಯರೆಲ್ಲರೂ ಕನ್ನಡದಲ್ಲಿಯೇ ಔಷಧಿ ಚೀಟಿ ಬರೆಯಬೇಕೆಂದು ಕಡ್ಡಾಯ ಮಾಡುವಲ್ಲಿ ಕೂಡಲೇ ಸರ್ಕಾರದ ಆದೇಶ ಜಾರಿ ಮಾಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಈ ಕುರಿತಂತೆ ಆರೋಗ್ಯ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ರವರಿಗೆ ಪತ್ರ ಬರೆದಿರುವ ಅವರು ರಾಜ್ಯ ಸರ್ಕಾರದ ಅಧೀನದಲ್ಲಿರುವ ಎಲ್ಲ ವೈದ್ಯರು ಇಂತಹ ಮಾನಸಿಕತೆಗೆ ತೆರೆದುಕೊಂಡಲ್ಲಿ ಕನ್ನಡ ಭಾಷೆಯ ಬೆಳವಣಿಗೆಗೆ ಒಂದು ಮಹತ್ವದ ದಾರಿ ದೊರಕಿದಂತೆ ಆಗುತ್ತದೆ. ಸರ್ಕಾರದ ಆದೇಶ ಈ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗುತ್ತದೆ ಎಂದಿದ್ದಾರೆ.

ವೈದ್ಯರ ದಿನದಂದು ಕನ್ನಡಪ್ರಿಯ ವೈದ್ಯರನ್ನು ಸತ್ಕರಿಸಿ

ಕನ್ನಡ ಪ್ರಿಯ ವೈದ್ಯರುಗಳನ್ನು, ಅವರ ಭಾಷಾ ಪರವಾದ ಕ್ರಿಯಾಶೀಲ ಚಟುವಟಿಕೆಗಳನ್ನು ಗುರುತಿಸಿ ಪ್ರತಿವರ್ಷ ವೈದ್ಯರ ದಿನದಂದು ಅಭಿನಂದಿಸುವ ಹಾಗೂ ಪುರಸ್ಕರಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ತಾಲೂಕು/ಜಿಲ್ಲೆ/ರಾಜ್ಯ ಹಂತದಲ್ಲಿ ಪ್ರತಿವರ್ಷ ಸತ್ಕರಿಸುವ ಕಾರ್ಯಕ್ರಮಗಳ ನಿರೂಪಣೆಯಾಗಬೇಕು ಎಂದು ಆಗ್ರಹಿಸಿರುವ ಡಾ.ಬಿಳಿಮಲೆ ಖಾಸಗಿ ಆಸ್ಪತ್ರೆಗಳ ಕನ್ನಡಪ್ರಿಯ ವೈದ್ಯರಲ್ಲಿಯೂ, ಆಸ್ಪತ್ರೆಗಳ ಮುಖ್ಯಸ್ಥರಲ್ಲಿಯೂ ಕನ್ನಡ ಬಳಕೆಗೆ ರಾಜ್ಯ ಸರ್ಕಾರವು ಪ್ರೋತ್ಸಾಹದಾಯಕ ವಾತಾವರಣವನ್ನು ಒದಗಿಸುತ್ತದೆ ಎಂಬ ಭರವಸೆಯನ್ನು ಮೂಡಿಸಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಸರ್ಕಾರ ನೀತಿ ನಿರೂಪಣೆಗೆ ಮುಂದಾಗಬೇಕೆಂದು ಕೋರಿದ್ದಾರೆ.

 

 

 

 

Leave a Reply

Your email address will not be published. Required fields are marked *

Verified by MonsterInsights