ಬೆಂಗಳೂರು : ಎಷ್ಟೇ ಓದಿ, ಕೆಲಸದಲ್ಲಿ ಎಷ್ಟೇ ಎಕ್ಸಪಿರಿಯನ್ಸ್ ಇದ್ದರೂ ಕೆಲವೊಮ್ಮೆ ಕೆಲಸ ಸಿಗೋದೆ ಕಷ್ಟವಾಗಿದೆ. ಅಂತಹದರಲ್ಲಿ ನಿರುದ್ಯೋಗಿ ಯುವಕರನ್ನೇ ಟಾರ್ಗೆಟ್ ಮಾಡಿ ಉದ್ಯೋಗ ಕೊಡಿಸೋದಾಗಿ ಹೇಳಿ ವಂಚನೆ ಮಾಡುತ್ತಿದ್ದ ದಂಪತಿಯನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಸರ್ಕಾರಿ ಕೆಲಸ ಕೊಡಿಸುವ ಆಸೆ ತೋರಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಮಾಡುತ್ತಿದ್ದ ಕಿಲಾಡಿ ಜೋಡಿ ಸದ್ಯ ಕಂಬಿ ಹಿಂದಿದೆ.
ಪ್ರಕಾಶ್ ಹಾಗೂ ಮಧು ಪ್ರಕಾಶ್ ಬಂಧಿತ ಆರೋಪಿಗಳು. ಪ್ರಕಾಶ್ ಹಾಗೂ ಮಧು ಜೋಡಿ, ಕೆಲಸಕ್ಕಾಗಿ ಅಲೆಯುವ ಯುವಕರನ್ನು ಹುಡುಕಿ ಸರ್ಕಾರಿ ನೌಕರಿ ಕೊಡಿಸೋದಾಗಿ ಕಲರ್ ಕಲರ್ ಕಾಗೆ ಹಾರಿಸುತ್ತಿದ್ದರು. ನಮಗೆ ದೊಡ್ಡ ದೊಡ್ಡ ರಾಜಕಾರಣಿಗಳ ಪರಿಚಯ ಇದೆ. ಅಲ್ಲದೆ ವಿವಿಧ ಇಲಾಖೆಯ ಮುಖ್ಯಸ್ಥರು ಪರಿಚಯ ಇದ್ದಾರೆ. ಖಾಲಿ ಇರುವ ಸರ್ಕಾರಿ ಕೆಲಸ ಕೊಡಿಸೋದಾಗಿ ಹೇಳಿ ಯುವಕರಿಂದ ಹಣ ವಸೂಲಿ ಮಾಡುತ್ತಿದ್ದರು. 6 ಲಕ್ಷ ಹಣ ಪಡೆದು ಕೆಲಸ ಕೊಡಿಸದೇ ಕಳ್ಳಾಟ ಆಡ್ತಿದ್ದರು. ಸದ್ಯ ವಿದ್ಯಾರಣ್ಯಪುರ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ವಿದ್ಯಾರಣ್ಯಪುರ ಠಾಣೆಯಲ್ಲೇ ಆರೋಪಿಗಳ ವಿರುದ್ಧ 3 ಪ್ರಕರಣ ದಾಖಲಿರೋದು ಪತ್ತೆಯಾಗಿದೆ. ನಗರದ ಹಲವು ಠಾಣೆಗಳಲ್ಲೂ ದಂಪತಿ ವಿರುದ್ಧ ಕೇಸ್ ದಾಖಲಾಗಿವೆ. ಬಂಧಿತರಿಂದ 2 ಲಕ್ಷ ನಗದು ಹಣ, 4 ಫೋನ್, ಒಂದು ದ್ವಿಚಕ್ರ ವಾಹನ, 6 ಬ್ಯಾಂಕ್ ಅಕೌಂಟ್ ಗೆ ಸೇರಿದಂತೆ 16 ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ವಶಕ್ಕೆ ಪಡೆಯಲಾಗಿದೆ. 11 ವಿವಿಧ ಕಂಪನಿಯ ವಾಚ್ ಗಳು, ಚಿನ್ನದಂತೆ ಕಾಣುವ 2 ನಕಲಿ ಬ್ರೇಸ್ ಲೈಟ್, 1 ಚೈನ್, 2 ಉಂಗುರ, 2 ಪೆಂಡೆಂಟ್ಗಳನ್ನು ಜಪ್ತಿ ಮಾಡಲಾಗಿದೆ.