ಬೆಂಗಳೂರು: ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ನಡೆದ ನಾಟಕೀಯ ಬೆಳವಣಿಗೆಗಳು ಮತ್ತು ಆಡಳಿತಾರೂಢ ಕಾಂಗ್ರೆಸ್ ಸದಸ್ಯರ ವರ್ತನೆಯ ಕುರಿತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸ್ಫೋಟಕ ವರದಿಯೊಂದನ್ನು ಸಲ್ಲಿಸಿದ್ದಾರೆ. ಸಾಮಾನ್ಯ ಆಡಳಿತಾತ್ಮಕ ವರದಿಗಳಿಗಿಂತ ಭಿನ್ನವಾಗಿ, ಅಧಿವೇಶನದಲ್ಲಿ ತಮಗಾದ ಮುಜುಗರ ಮತ್ತು ಸರ್ಕಾರದ ಧೋರಣೆಯ ಕುರಿತು ಸವಿವರವಾದ ‘ವಿಶೇಷ ವರದಿ’ ರವಾನಿಸಿದ್ದಾರೆ.
ಕೇಂದ್ರ ಸರ್ಕಾರದ ನೂತನ ‘ವಿಬಿ ಜಿ ರಾಮ್ ಜಿ’ ಕಾಯ್ದೆಯನ್ನು ಟೀಕಿಸುವ ಅಂಶಗಳು ರಾಜ್ಯ ಸರ್ಕಾರ ಸಿದ್ಧಪಡಿಸಿದ್ದ ಭಾಷಣದಲ್ಲಿದ್ದವು. ಇದನ್ನು ಯಥಾವತ್ತಾಗಿ ಓದಲು ನಿರಾಕರಿಸಿದ ರಾಜ್ಯಪಾಲರು, ಭಾಷಣ ಪರಿಷ್ಕರಿಸುವಂತೆ ಸೂಚಿಸಿದ ಸಂದರ್ಭದಲ್ಲಿ ನಡೆದ ವಿವರವನ್ನು ವರದಿಯಲ್ಲಿ ನೀಡಿದ್ದಾರೆ.
ಅಧಿವೇಶನದಲ್ಲಿ ಭಾಷಣ ಮುಗಿಸಿ ಹೊರಬರುವಾಗ ಕಾಂಗ್ರೆಸ್ ಸದಸ್ಯರು ತಮ್ಮ ವಿರುದ್ಧ ಘೋಷಣೆ ಕೂಗಿದ್ದು ಮತ್ತು ಘೇರಾವ್ ಹಾಕಲು ಯತ್ನಿಸಿದ ಬಗ್ಗೆ ರಾಜ್ಯಪಾಲರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಸಾಂವಿಧಾನಿಕ ಹುದ್ದೆಗೆ ತೋರಿದ ಅಗೌರವ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ಸರ್ಕಾರ ಮತ್ತು ಲೋಕಭವನದ ನಡುವಿನ ತಿಕ್ಕಾಟದ ನಡುವೆಯೂ ತಮಗೆ ನೀಡಲಾದ ಸಂವಿಧಾನಬದ್ಧ ಜವಾಬ್ದಾರಿಯನ್ನು ಹೇಗೆ ನಿಭಾಯಿಸಿದೆ ಎಂಬುದನ್ನು ಗೆಹ್ಲೋಟ್ ಅವರು ರಾಷ್ಟ್ರಪತಿಗಳಿಗೆ ವಿವರಿಸಿದ್ದಾರೆ. ರಾಜ್ಯಪಾಲರು ಜನವರಿ 21 ಮತ್ತು 22ರಂದು ನಡೆದ ಪ್ರತಿಯೊಂದು ಬೆಳವಣಿಗೆಯನ್ನು ದಿನಚರಿಯ ಮಾದರಿಯಲ್ಲಿ ವರದಿಯಲ್ಲಿ ದಾಖಲಿಸಿದ್ದಾರೆ. ಸ್ಪೀಕರ್ ಯು.ಟಿ. ಖಾದರ್, ಸಭಾಪತಿ ಬಸವರಾಜ್ ಹೊರಟ್ಟಿ ಹಾಗೂ ಸಚಿವ ಎಚ್.ಕೆ. ಪಾಟೀಲ್ ಅವರೊಂದಿಗೆ ನಡೆದ ಸಭೆಗಳ ಮಾಹಿತಿಯನ್ನು ವರದಿಗೆ ಲಗತ್ತಿಸಲಾಗಿದೆ.
ರಾಜ್ಯಪಾಲರ ಈ ವರದಿಯು ಕೇವಲ ಮಾಹಿತಿಗಾಗಿ ಸೀಮಿತವಾಗಿದೆಯೇ ಅಥವಾ ರಾಜ್ಯ ಸರ್ಕಾರದ ವರ್ತನೆಯ ಕುರಿತು ರಾಷ್ಟ್ರಪತಿಗಳು ಕೇಂದ್ರ ಸರ್ಕಾರದ ಮೂಲಕ ಏನಾದರೂ ಕಠಿಣ ಸೂಚನೆ ನೀಡಲಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದೆ. ರಾಜ್ಯಪಾಲರು ತಾವು ಅನುಭವಿಸಿದ ಒತ್ತಡ ಮತ್ತು ಮುಜುಗರವನ್ನು ನೇರವಾಗಿ ರಾಷ್ಟ್ರಪತಿಗಳ ಗಮನಕ್ಕೆ ತಂದಿರುವುದು ರಾಜ್ಯ ಸರ್ಕಾರದ ಪಾಲಿಗೆ ಇಕ್ಕಟ್ಟಿನ ಪರಿಸ್ಥಿತಿ ತಂದೊಡ್ಡಿದೆ.


