ಗದಗ: ಮುಂಡರಗಿ ತಾಲೂಕಿನ ಶಿಂಗಟಾಲೂರ ಗ್ರಾಮದಲ್ಲಿ ಅಸ್ಪೃಶ್ಯತೆಯ ಕಪಿಮುಷ್ಟಿಯಿಂದ ದಲಿತರನ್ನು ಮುಕ್ತಗೊಳಿಸಲು ಸರ್ಕಾರವೇ ಮಹತ್ವದ ಹೆಜ್ಜೆಯನ್ನಿಟ್ಟಿದೆ. ದಲಿತರಿಗೆ ಕ್ಷೌರ ಮಾಡಲು ಸವರ್ಣೀಯರು ನಿರಾಕರಿಸುತ್ತಿದ್ದ ಹಿನ್ನೆಲೆಯಲ್ಲಿ, ಈಗ ಸರ್ಕಾರವೇ ಮುತುವರ್ಜಿ ವಹಿಸಿ ಗ್ರಾಮದಲ್ಲಿ ಅಧಿಕೃತವಾಗಿ ಕ್ಷೌರದಂಗಡಿಯನ್ನು ಆರಂಭಿಸಿದೆ. ಈ ಮೂಲಕ ದಶಕಗಳ ಕಾಲ ನಡೆದಿದ್ದ ತಾರತಮ್ಯಕ್ಕೆ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಎಂಡ್ ಕಾರ್ಡ್ ಹಾಕಿವೆ.
ಗ್ರಾಮದಲ್ಲಿ ಅನೇಕ ವರ್ಷಗಳಿಂದ ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಲಾಗುತ್ತಿತ್ತು. ಮಹಾನವಮಿಯಂದು ವೀರಭದ್ರೇಶ್ವರ ಸ್ವಾಮಿ ದೇವರು ಹಡಪದ ಸಮಾಜದವರ ಮನೆಗೆ ಭೇಟಿ ನೀಡುತ್ತಾರೆ ಎಂಬ ನಂಬಿಕೆಯ ನೆಪವೊಡ್ಡಿ, ದಲಿತರಿಗೆ ಕ್ಷೌರ ಮಾಡಿದರೆ ಗ್ರಾಮಕ್ಕೆ ಅಥವಾ ತಮಗೆ ಕೆಟ್ಟದಾಗುತ್ತದೆ ಎಂಬ ಮೂಢನಂಬಿಕೆಯನ್ನು ಬಿತ್ತಲಾಗಿತ್ತು. ಇದರಿಂದಾಗಿ ಸ್ಥಳೀಯ ದಲಿತರು ಕ್ಷೌರ ಮಾಡಿಸಿಕೊಳ್ಳಲು ಕಿಲೋಮೀಟರ್‌ಗಟ್ಟಲೆ ದೂರದ ಪಕ್ಕದ ಊರುಗಳಿಗೆ ಅಲೆಯುವ ಅನಿವಾರ್ಯತೆ ಎದುರಾಗಿತ್ತು.
ಸಮಾಜ ಕಲ್ಯಾಣ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ಸಹಯೋಗದೊಂದಿಗೆ ‘ಅಸ್ಪೃಶ್ಯತೆ ನಿರ್ಮೂಲನೆ ಜಾಗೃತಿ ಮೂಲಕ ಸಾಮರಸ್ಯ ಬದುಕು ಗ್ರಾಮದ ಬೆಳಕು’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿ ನೂತನ ಕ್ಷೌರದಂಗಡಿಯನ್ನು ಉದ್ಘಾಟಿಸಲಾಯಿತು.ಪಕ್ಕದ ತಿಪ್ಪಾಪೂರ ಗ್ರಾಮದ ಬಸವರಾಜ್ ಹಡಪದ ಅವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಅಂಗಡಿಯನ್ನು ಮಂಜೂರು ಮಾಡಲಾಗಿದ್ದು, ಅವರು ಗ್ರಾಮದ ಎಲ್ಲಾ ವರ್ಗದವರಿಗೂ ಸಮಾನವಾಗಿ ಕ್ಷೌರ ಸೇವೆ ನೀಡಲಿದ್ದಾರೆ.


