ಬೆಂಗಳೂರು : ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ಸಮಾಧಿಯನ್ನು ಕೆಡವಿದ ಬಳಿಕ ವಿವಾದ ಭುಗಿಲೆದ್ದಿದೆ. ಅಭಿಮಾನ್ ಸ್ಟುಡಿಯೋದ ಜಾಗವನ್ನು ಅರಣ್ಯ ಪ್ರದೇಶವೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಜಮೀನನ್ನು ಸರ್ಕಾರ ವಾಪಸ್ಸು ಪಡೆಯಲು ನಿರ್ಧರಿಸಲಾಗಿದೆ. ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣ ಆಗಬೇಕು ಎಂದು ವಿಷ್ಣುವರ್ಧನ್ ಅಭಿಮಾನಿಗಳು ಆಗ್ರಹಿಸಿದ್ದು, ಹೀಗಿರುವಾಗಲೇ ಅಭಿಮಾನ್ ಸ್ಟುಡಿಯೋ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಡಿಸಿಗೆ ಅರಣ್ಯ ಅಧಿಕಾರಿ ಪತ್ರ ಬರೆದಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ, ಮೈಲಸಂದ್ರ ಗ್ರಾಮಕ್ಕೆ ಸೇರಿದ ಸರ್ವೇ ನಂ, 26ರಲ್ಲಿ ಅಭಿಮಾನ್ ಸ್ಟುಡಿಯೋಗೆ ಸರ್ಕಾರ ನೀಡಿರುವ ಅರಣ್ಯ ಪ್ರದೇಶ ಆದೇಶವನ್ನು ರದ್ದು ಪಡಿಸಿ ಹಿಂಪಡೆಯುವ ಬಗ್ಗೆ ಅರಣ್ಯ ಇಲಾಖೆ ಪತ್ರದಲ್ಲಿ ಉಲ್ಲೇಖಿಸಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್ ರವೀಂದ್ರಕುಮಾರ್ ಅವರು ಪತ್ರ ಬರೆದಿದ್ದಾರೆ.
ಸರ್ಕಾರಿ ಆದೇಶದ ಅನ್ವಯ ಏಪ್ರಿಲ್ 09, 1969 ರಂದು 20 ಎಕರೆ ಪ್ರದೇಶವನ್ನು ಟಿ ಎನ್ ಬಾಲಕೃಷ್ಣ ಅವರಿಗೆ ಅಭಿಮಾನ್ ಚಿತ್ರ ಸ್ಟುಡಿಯೋ ಸ್ಥಾಪಿಸುವ ಸಲುವಾಗಿ 20 ವರ್ಷಗಳ ಅವಧಿಗೆ ಗೇಣಿ ಆಧಾರದ ಮೇಲೆ ನೀಡಲಾಗಿತ್ತು. ಸರ್ಕಾರಿ ಆದೇಶದಲ್ಲಿ ಅಭಿಮಾನ್ ಸ್ಟಡಿಯೋ ಅಭಿವೃದ್ಧಿ ಹೊರತಾಗಿ ಬೇರೆ ಯಾವುದೇ ಉದ್ದೇಶಕ್ಕೆ ಬಳಸದಿರಲು ಮಾರಾಟ/ ಪರಭಾರೆ ಕೊಡದಿರಲು ಷರತ್ತು ವಿಧಿಸಲಾಗಿತ್ತು.
ಉಲ್ಲಂಘನೆಯಾದಲ್ಲಿ ಮಂಜೂರಾತಿ ರದ್ಧುಪಡಿಸಿ ಭುಮಿಯನ್ನು ಸರ್ಕಾರ ಹಿಂಪಡೆಯಲಾಗುವುದು ಎನ್ನುವ ಆದೇಶ ಸ್ಪಷ್ಟವಾಗಿ ನಮೂದಿಸಲಾಗಿತ್ತು. ಇದನ್ನ ಮನವಿ ಪತ್ರದಲ್ಲಿ ಮತ್ತೆ ಸೂಚಿಸಿ ಅರಣ್ಯ ಇಲಾಖೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಬಾಲಕೃಷ್ಣ ನಿಧನದ ಬಳಿಕ ಅವರ ಮಕ್ಕಳಾದ ಗಣೇಶ್ ಹಾಗೂ ಮೊಮ್ಮಗ ಕಾರ್ತಿಕ್ ಅನಧಿಕೃತವಾಗಿ 10 ಎಕರೆ ಆಸ್ತಿ ಮಾರಾಟ ಮಾಡಿದ್ದಾರೆ ಎಂದು ನಮೂದಿಸಲಾಗಿದೆ. ಅಭಿಮಾನ್ ಸ್ಟುಡಿಯೋ ನವೀಕರಣ ಮಾಡುವ ಸಲುವಾಗಿ ಬೇಕಾಗುವ ಹಣಕ್ಕಾಗಿ ಆಸ್ತಿ ಮಾರಾಟಕ್ಕೆ ಅನುಮತಿ ಕೇಳಿ ಮಾರಿದ್ದರು. ಇಲ್ಲಿಯೂ ಉದ್ದೇಶವನ್ನು ಉಲ್ಲಂಘನೆ ಮಾಡಿದ್ದಾರೆ ಎಂಬುದಾಗಿ ಪತ್ರದಲ್ಲಿ ಉಲೇಖವಾಗಿದೆ.
ವಾಪಸ್ಸು ಪಡೆಯುವ ನಿರ್ಧಾರ ಏಕೆ?
60ರ ದಶಕದಲ್ಲಿ ಬಾಲಕೃಷ್ಣ ಅವರಿಗೆ ಸರ್ಕಾರದಿಂದ ನೀಡಲಾಗಿರುವ 20 ಎಕರೆ ಭೂಮಿ ನೀಡಲಾಗಿತ್ತು. ನಿಯಮಗಳ ಪ್ರಕಾರ, 20 ವರ್ಷಗಳವರೆಗೆ ಆ ಭೂಮಿಯನ್ನು ಯಾರಿಗೂ ಪರಭಾರೆ ಮಾಡುವಂತಿಲ್ಲ. ಆದರೆ, ಅದರಲ್ಲಿ 12 ಎಕರೆಯನ್ನು ಬಾಲಕೃಷ್ಣ ಅವರ ಮಕ್ಕಳು ಮಾರಾಟ ಮಾಡಿದ್ದಾರೆ. ಅದಕ್ಕೆ ಅವರು ಹೇಳಿರುವ ಕಾರಣ, ಅಭಿಮಾನ್ ಸ್ಟುಡಿಯೋ ಕಟ್ಟಲು ಹಣ ಬೇಕಾಗಿದ್ದರಿಂದ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ.
ಹಾಗಾಗಿ, ಉಳಿದ ಎಂಟು ಎಕರೆ ಜಾಗವನ್ನು, ಜಮೀನು ನೀಡುವಾಗ ವಿಧಿಸಲಾಗಿದ್ದ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕೆ ದಂಡದ ರೂಪವಾಗಿ ಸರ್ಕಾರದ ಸುಪರ್ದಿಗೆ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅಭಿಮಾನ್ ಸ್ಟುಡಿಯೋದ ಜಾಗವನ್ನು ಮಾರಾಟ ಮಾಡಿದ್ದರೂ ಅದರಿಂದ ಬಂದ ಹಣವನ್ನು ಅಭಿಮಾನ್ ಸ್ಟುಡಿಯೋದ ಅಭಿವೃದ್ಧಿಗೂ ಬಳಸಿಲ್ಲವಾದ್ದರಿಂದ ಅದೂ ಸಹ ನಿಯಮಗಳ ಉಲ್ಲಂಘನೆಯ ಪಟ್ಟಿಗೆ ಸೇರುತ್ತದಾದ್ದರಿಂದ ಉಳಿಕೆ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲು ತೀರ್ಮಾನಿಸಲಾಗಿದೆ.