ಚಿಕ್ಕಬಳ್ಳಾಪುರ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಮೇಲೆ ಕಾಂಗ್ರೆಸ್‌ ಗೂಂಡಾಗಿರಿ, ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕುಡಿಯಲು ನೀರಿಲ್ಲ. ಆದರೆ ಕಾಂಗ್ರೆಸ್‌ ಸರ್ಕಾರ ಎಲ್ಲದಕ್ಕೂ ತೆರಿಗೆ ವಿಧಿಸುತ್ತಿದೆ. ಇಂತಹ ಕಾಂಗ್ರೆಸ್ಸನ್ನು ತಡೆಯಲು ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಪರವಾಗಿ, ಗೌರಿಬಿದನೂರು ತಾಲೂಕಿನ ವಾಟದ ಹೊಸಹಳ್ಳಿಯಲ್ಲಿ ಆರ್‌.ಅಶೋಕ ಚುನಾವಣಾ ಪ್ರಚಾರ ನಡೆಸಿದರು.

ಈ ಸಂದರ್ಭ ಮಾತನಾಡಿದ ಅವರು, ರಾಜ್ಯದಲ್ಲಿ ಕುಡಿಯಲು ನೀರಿಲ್ಲ. ಬರಗಾಲಕ್ಕೆ ಪರಿಹಾರವಿಲ್ಲ. ಬಿಜೆಪಿ ಸರ್ಕಾರವಿದ್ದಾಗ ಮಳೆ ಬರುತ್ತಿದ್ದರೆ, ಕಾಂಗ್ರೆಸ್‌ ಸರ್ಕಾರ ಬಂದ ನಂತರ ಮಳೆ ಸ್ಥಗಿತಗೊಂಡಿದೆ. ವಿದ್ಯುತ್‌ ಯಾವಾಗ ಬರುತ್ತದೆ ಎಂದು ತಿಳಿಯುವುದಿಲ್ಲ. ಕಾಂಗ್ರೆಸ್‌ ಸರ್ಕಾರದವರು ಎಲ್ಲದರ ಮೇಲೂ ತೆರಿಗೆ ವಿಧಿಸಿದ್ದಾರೆ. ಮಹಿಳೆಯರಿಗೆ ಕೊಡುವ 2,000 ರೂ. ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್‌ ಅವರ ಮನೆಯ ದುಡ್ಡಲ್ಲ. ಗಂಡನಿಂದ ಹಣ ಕಿತ್ತು ಅದನ್ನು ಹೆಂಡತಿಗೆ ನೀಡುತ್ತಿದ್ದಾರೆ. ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕಿದ್ದಾರೆ. ಹಲವು ಕಡೆ ಬಾಂಬ್‌ ಸ್ಫೋಟವಾಗುತ್ತಿದೆ. ಇಂತಹ ಕಾಂಗ್ರೆಸ್ಸನ್ನು ತಡೆಯಲು ಮೋದಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂದರು.

ಇದು ಸಿದ್ದರಾಮಯ್ಯನವರ ಚುನಾವಣೆ ಅಲ್ಲ. ಇದು ನರೇಂದ್ರ ಮೋದಿ ಮತ್ತು ರಾಹುಲ್‌ ಗಾಂಧಿಯ ಚುನಾವಣೆ. ಆದರೆ ಜನರು ನರೇಂದ್ರ ಮೋದಿಯವರನ್ನೇ ಆಯ್ಕೆ ಮಾಡುತ್ತಾರೆ. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗಲಿದೆ. ಆದರೆ ಕಾಂಗ್ರೆಸ್‌ ಅಭ್ಯರ್ಥಿ ಗೆದ್ದರೆ ರಾಜ್ಯಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ. ಡಾ.ಕೆ.ಸುಧಾಕರ್‌ ಗೆದ್ದರೆ ಮೋದಿಯವರ ಜೊತೆ ಕೂರುತ್ತಾರೆ ಎಂದರು.

ಕಾಂಗ್ರೆಸ್‌ ಗೂಂಡಾಗಿರಿ

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗೆ ಕಾಂಗ್ರೆಸ್‌ ಗೂಂಡಾಗಳು ಅವಾಚ್ಯ ಪದಗಳಿಂದ ನಿಂದಿಸಿ ಅಪಮಾನ ಮಾಡಿದ್ದಾರೆ. ಈ ರೀತಿ ಗೂಂಡಾಗಿರಿ ಮಾಡಿಯೇ ಆ ಪಕ್ಷ ಧೂಳಿಪಟ ಆಗಿದೆ. ಅವಾಚ್ಯ ಪದಗಳಿಂದ ದೇವೇಗೌಡರನ್ನು ನಿಂದಿಸಿದವರಿಗೆ ಜನರು ಸರಿಯಾದ ಪಾಠ ಕಲಿಸಲಿದ್ದಾರೆ. ಒಕ್ಕಲಿಗ ಸಮುದಾಯದ ನಾಯಕರಾಗಿ, ಮುಖ್ಯಮಂತ್ರಿಯಾಗಿ ಎಚ್‌.ಡಿ.ದೇವೇಗೌಡರು ಕೆಲಸ ಮಾಡಿದ್ದಾರೆ. ಅಂತಹವರನ್ನು ಕಾಂಗ್ರೆಸ್‌ ಅವಮಾನ ಮಾಡಿದೆ ಎಂದರು.

ಇಡೀ ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆ ಜಾಸ್ತಿಯಾಗಿದೆ. ಹಿಂದೂಗಳನ್ನು ಕಡೆಗಣಿಸಲಾಗುತ್ತಿದೆ. ನೀಚ ಬುದ್ಧಿಯ ಕಾಂಗ್ರೆಸ್‌ಗೆ ಜನರು ಲೋಕಸಭೆ ಚುನಾವಣೆಯಲ್ಲಿ ಬುದ್ಧಿ ಕಲಿಸಲಿದ್ದಾರೆ. ಕಾಂಗ್ರೆಸ್‌ಗೆ ನಾಯಕರಿಗೆ ಮಾನ ಮರ್ಯಾದೆ ಇದ್ದಿದ್ದರೆ ಕಂಗನಾ ರನೌತ್‌, ಹೇಮಮಾಲಿನಿ ಬಗ್ಗೆ ಕೀಳಾಗಿ ಮಾತಾಡುತ್ತಿರಲಿಲ್ಲ. ಸಿಎಂ ಸಿದ್ದರಾಮಯ್ಯನವರು ಸಾರ್ವಜನಿಕ ಸಭೆಯಲ್ಲೇ ಮಹಿಳೆಯ ಸೀರೆ ಎಳೆದಿದ್ದರು. ಎಚ್‌.ಡಿ.ಕುಮಾರಸ್ವಾಮಿ ಒಳ್ಳೆಯ ದೃಷ್ಟಿಯಿಂದ ಮಾತನಾಡಿದ್ದಾರೆ ಎಂದರು.

ಕಳೆದ ಬಾರಿ ಕಾಂಗ್ರೆಸ್‌ ನಾಯಕರು ಎಚ್‌.ಡಿ.ದೇವೇಗೌಡರ ಮನೆಯ ಬಳಿ ಹುಚ್ಚು ನಾಯಿಯಂತೆ ಹೋಗಿದ್ದರು. ಎರಡು ಬಾರಿ ಅವರ ಜೊತೆಗೆ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿತ್ತು. ಅಂತಹ ಕಾಂಗ್ರೆಸ್‌ ನಾಯಕರು ಜೆಡಿಎಸ್‌ ಬಗ್ಗೆ ಟೀಕೆ ಮಾಡುತ್ತಿರುವುದಕ್ಕೆ ನಾಚಿಕೆ ಪಟ್ಟುಕೊಳ್ಳಬೇಕು ಎಂದರು.

ಲೋಕಸಭೆ ಚುನಾವಣೆಯ ಸರ್ವೆಯಲ್ಲಿ ಬಿಜೆಪಿ ಬಹುಮತ ಪಡೆಯಲಿದೆ ಎಂಬ ಫಲಿತಾಂಶ ಬಂದಿದೆ. ಆದರೆ ನಾವೇನೂ ಸರ್ಕಾರವನ್ನು ಮುಳುಗಿಸಲು ಹೋಗುವುದಿಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಸಿಎಂ ಸ್ಥಾನಕ್ಕಾಗಿ ಕಚ್ಚಾಡುತ್ತಿದ್ದು, ಅವರೇ ಸರ್ಕಾರವನ್ನು ಮುಳುಗಿಸಲಿದ್ದಾರೆ. ಆರು ತಿಂಗಳಲ್ಲಿ ಸರ್ಕಾರ ಬೀಳಲಿದೆ ಎಂದರು.

By admin

Leave a Reply

Your email address will not be published. Required fields are marked *

Verified by MonsterInsights