ದೇಶ/ವಿದೇಶಸುದ್ದಿ

ಟ್ರಂಪ್ ಭಾಷಣದ ಬೆನ್ನಲ್ಲೇ ಜಾಗತಿಕ ತೈಲ ಮಾರುಕಟ್ಟೆ ತಲ್ಲಣ..!

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಯುದ್ಧದ ಕುರಿತು ನಡೆಸಿದ ಪ್ರೈಮ್‌ಟೈಮ್ ಭಾಷಣವು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಮೂಡಿಸಿದೆ. ಯುದ್ಧವು ಇನ್ನು 2-3 ವಾರಗಳ ಕಾಲ ಮುಂದುವರಿಯಲಿದೆ ಎಂಬ ಟ್ರಂಪ್ ಹೇಳಿಕೆ ಹೊರಬೀಳುತ್ತಿದ್ದಂತೆ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ದಿಢೀರ್ ಏರಿಕೆ ಕಂಡಿದೆ. ಪ್ರಮುಖವಾಗಿ ಒಪೆಕ್ ರಾಷ್ಟ್ರಗಳ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ. 4.5 ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 106.42 ಡಾಲರ್ ತಲುಪಿದರೆ, ಅಮೆರಿಕದ ಡಬ್ಲ್ಯುಟಿಐ (WTI) ದರವು ಶೇ. 4 ರಷ್ಟು ಏರಿಕೆಯಾಗಿ 104.24 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ.

ತೈಲ ಬೆಲೆ ಏರಿಕೆಗೆ ಇರಾನ್‌ನ ಕ್ರೂರ ಆಡಳಿತ ಮತ್ತು ತೈಲ ನೌಕೆಗಳ ಮೇಲಿನ ದಾಳಿಗಳೇ ಕಾರಣ ಎಂದು ಟ್ರಂಪ್ ಆರೋಪಿಸಿದ್ದಾರೆ. ಒಂದು ವೇಳೆ ಇರಾನ್ ಶಾಂತಿ ಮಾತುಕತೆಗೆ ಬರದಿದ್ದರೆ, ಮುಂದಿನ ಕೆಲವು ವಾರಗಳಲ್ಲಿ ಅಲ್ಲಿನ ತೈಲ ಕೇಂದ್ರಗಳು ಮತ್ತು ವಿದ್ಯುತ್ ಘಟಕಗಳ ಮೇಲೆ ಭೀಕರ ದಾಳಿ ನಡೆಸಿ ಆ ದೇಶವನ್ನು ‘ಶಿಲಾಯುಗ’ಕ್ಕೆ ಕೊಂಡೊಯ್ಯುವುದಾಗಿ ಅವರು ಗುಡುಗಿದ್ದಾರೆ. ಆದರೆ, ಈ ಬೆಲೆ ಏರಿಕೆ ತಾತ್ಕಾಲಿಕವಾಗಿದ್ದು, ಯುದ್ಧ ಮುಕ್ತಾಯವಾದ ನಂತರ ತೈಲ ದರಗಳು ಗಣನೀಯವಾಗಿ ಕುಸಿಯಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಅಮೆರಿಕದ ಇಂಧನ ಸ್ವಾವಲಂಬನೆಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ಟ್ರಂಪ್, ಅಮೆರಿಕವು ಸೌದಿ ಅರೇಬಿಯಾ ಮತ್ತು ರಷ್ಯಾಕ್ಕಿಂತಲೂ ಹೆಚ್ಚಿನ ತೈಲ ಉತ್ಪಾದಿಸುತ್ತಿದ್ದು, ವಿಶ್ವದ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ ಎಂದು ತಿಳಿಸಿದ್ದಾರೆ. ಹಾರ್ಮುಜ್ ಜಲಸಂಧಿಯ ತೈಲದ ಅಗತ್ಯ ಅಮೆರಿಕಕ್ಕಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ತೈಲದ ಕೊರತೆ ಎದುರಿಸುತ್ತಿರುವ ಮಿತ್ರ ರಾಷ್ಟ್ರಗಳು ಅಮೆರಿಕದಿಂದಲೇ ತೈಲ ಖರೀದಿಸಬಹುದು ಎಂಬ ಸಲಹೆ ನೀಡಿದ್ದಾರೆ. ಜಾಗತಿಕವಾಗಿ ತೈಲ ಬೆಲೆ ಏರಿಕೆಯಾದಾಗ ಅಮೆರಿಕಕ್ಕೆ ಆರ್ಥಿಕವಾಗಿ ಲಾಭವಾಗಲಿದೆ.

Comments (0)

Your email address will not be published. Required fields are marked *

Back to top button