Top Newsದೇಶ/ವಿದೇಶಸುದ್ದಿ

ಜಾಗತಿಕ ತೈಲ ಬಿಕ್ಕಟ್ಟು; ಭಾರತದ ಬಳಿ ಇದೆಯೇ 50 ದಿನಗಳ ಸ್ಟಾಕ್?

ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದಿರುವ ಯುದ್ಧದ ಕಿಚ್ಚು ಇದೀಗ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದ್ದು, ವಿಶ್ವದಾದ್ಯಂತ ತೈಲ ಕೊರತೆಯ ಭೀತಿ ಎದುರಾಗಿದೆ. ವಿಶ್ವದ ಒಟ್ಟು ತೈಲ ಸಾಗಾಟದ ಶೇಕಡಾ 80 ರಷ್ಟು ವ್ಯವಹಾರ ನಡೆಯುವ ಹಾರ್ಮೋಜ್ ಜಲಸಂಧಿಯಲ್ಲಿ ಇರಾನ್ ಮತ್ತು ಅಮೆರಿಕ-ಇಸ್ರೇಲ್ ಜಂಟಿ ಕಾರ್ಯಾಚರಣೆಯಿಂದಾಗಿ ಸಾಗಾಟ ಸಂಪೂರ್ಣ ಸ್ಥಗಿತಗೊಂಡಿದೆ. ಈ ಬೆಳವಣಿಗೆಯಿಂದಾಗಿ ಕಚ್ಚಾ ತೈಲ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿದ್ದು, ಈಗಾಗಲೇ ರಷ್ಯಾ ತನ್ನ ಕಚ್ಚಾ ತೈಲದ ದರವನ್ನು ಏರಿಕೆ ಮಾಡುವ ಮೂಲಕ ಜಾಗತಿಕ ಆರ್ಥಿಕತೆಯ ಮೇಲೆ ಒತ್ತಡ ಹೇರಿದೆ.

ಭಾರತವು ಈ ಬಿಕ್ಕಟ್ಟನ್ನು ಅತ್ಯಂತ ನಿಕಟವಾಗಿ ಅವಲೋಕಿಸುತ್ತಿದ್ದು, ದೇಶದ ಇಂಧನ ಭದ್ರತೆಯ ದೃಷ್ಟಿಯಿಂದ ತುರ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಸದ್ಯದ ಮಾಹಿತಿ ಪ್ರಕಾರ, ಭಾರತದ ಬಳಿ ಸುಮಾರು 45 ರಿಂದ 50 ದಿನಗಳ ಕಾಲ ದೇಶದ ಅಗತ್ಯವನ್ನು ಪೂರೈಸಲು ಬೇಕಾದಷ್ಟು ಕಚ್ಚಾ ತೈಲದ ಸಂಗ್ರಹವಿದೆ. ವಿಶೇಷವೆಂದರೆ, ಕರ್ನಾಟಕದ ಮಂಗಳೂರು ಮತ್ತು ಪಾದೂರು ಬಳಿ ಇರುವ ಬೃಹತ್ ಭೂಗತ ತೈಲ ದಾಸ್ತಾನು ಕೇಂದ್ರಗಳಲ್ಲಿ ಹೆಚ್ಚಿನ ಪ್ರಮಾಣದ ಕಚ್ಚಾ ತೈಲವನ್ನು ತುರ್ತು ಪರಿಸ್ಥಿತಿಗಾಗಿ ಕಾಯ್ದಿರಿಸಲಾಗಿದೆ. ಒಂದು ವೇಳೆ ಯುದ್ಧ ದೀರ್ಘಕಾಲ ಮುಂದುವರಿದರೆ ಭಾರತಕ್ಕೂ ತೈಲ ಕೊರತೆ ತಟ್ಟುವ ಸಾಧ್ಯತೆ ಇರುವುದರಿಂದ, ತೈಲ ಸಂಸ್ಥೆಗಳು ಪರ್ಯಾಯ ಮಾರ್ಗಗಳ ಹುಡುಕಾಟದಲ್ಲಿವೆ.

ಇತಿಹಾಸದಲ್ಲಿ ಈ ಹಿಂದೆ ಇರಾನ್-ಇರಾಕ್ ಯುದ್ಧದ ಸಮಯದಲ್ಲಿ ವಿಶ್ವವು ತೀವ್ರ ತೈಲ ಬಿಕ್ಕಟ್ಟನ್ನು ಎದುರಿಸಿತ್ತು. ಇದೀಗ ಅಂತಹದ್ದೇ ಪರಿಸ್ಥಿತಿ ಮರುಕಳಿಸುವ ಲಕ್ಷಣಗಳು ಕಾಣಿಸುತ್ತಿವೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆಯಾಗುತ್ತಿರುವುದು ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲೆ ನೇರ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ. ಭಾರತ ಸರ್ಕಾರವು ರಷ್ಯಾ ಮಾತ್ರವಲ್ಲದೆ ಇತರೆ ರಾಷ್ಟ್ರಗಳಿಂದಲೂ ತೈಲ ಆಮದು ಮಾಡಿಕೊಳ್ಳುವ ಕುರಿತು ಮಾತುಕತೆ ನಡೆಸುತ್ತಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಸನ್ನದ್ಧವಾಗಿದೆ.

Comments (0)

Your email address will not be published. Required fields are marked *

Back to top button