
90ರ ದಶಕದ ಗ್ಲಾಮರ್ ಗೊಂಬೆ, ಸುಂದರ ಕಾಲುಗಳ ಚೆಲುವೆ ಎಂದೇ ಖ್ಯಾತರಾಗಿದ್ದ ನಟಿ ರಂಭಾ ಈಗ ದೀರ್ಘ ವಿರಾಮದ ನಂತರ ಸಿನಿಮಾ ರಂಗಕ್ಕೆ ರೀ-ಎಂಟ್ರಿ ನೀಡಲು ಸಜ್ಜಾಗುತ್ತಿದ್ದಾರೆ. 2000 ಕೋಟಿ ರೂಪಾಯಿ ಆಸ್ತಿಯ ಒಡತಿಯಾಗಿದ್ದರೂ, ಸಿನಿಮಾದ ಮೇಲಿನ ಒಲವು ಕಡಿಮೆಯಾಗದ ಕಾರಣ 50ನೇ ವಯಸ್ಸಿನಲ್ಲಿ ಅವರು ಕಂಬ್ಯಾಕ್ ಮಾಡಲು ಬಿಗ್ ಪ್ಲ್ಯಾನ್ ರೂಪಿಸಿದ್ದಾರೆ. ವಿಜಯಲಕ್ಷ್ಮೀ ಎಂಬ ಹೆಸರಿನ ಈ ನಟಿ ‘ರಂಭಾ’ ಎಂದು ಬದಲಾಗಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಿಂಚಿದ್ದರು. ವಿಶೇಷವೆಂದರೆ, ಅಂದಿನ ಕಾಲದಲ್ಲೇ ತಮ್ಮ ಸುಂದರ ಕಾಲುಗಳಿಗೆ ಇನ್ಶೂರೆನ್ಸ್ ಮಾಡಿಸಿ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದ ಅವರು, ಇತ್ತೀಚಿನ ವರ್ಷಗಳಲ್ಲಿ ತೀವ್ರ ಕಾಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಇದೀಗ ಆ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ಅವರು, ಮತ್ತೆ ಬಣ್ಣ ಹಚ್ಚಲು ಸಿದ್ಧರಾಗಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಸಖತ್ ಕುತೂಹಲ ಮೂಡಿಸಿದೆ.

ಕನ್ನಡ ಚಿತ್ರರಂಗದೊಂದಿಗೂ ರಂಭಾ ಅವರಿಗೆ ಅವಿನಾಭಾವ ಸಂಬಂಧವಿದ್ದು, ನವರಸ ನಾಯಕ ಜಗ್ಗೇಶ್ ನಟನೆಯ ‘ಸರ್ವರ್ ಸೋಮಣ್ಣ’ ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದರು. ತದನಂತರ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ನಟಿಸಿದ ‘ಓ ಪ್ರೇಮವೇ’ ಸಿನಿಮಾ ಮತ್ತು ಅವರ ಕೆಮಿಸ್ಟ್ರಿಯನ್ನು ಕನ್ನಡಿಗರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಕನ್ನಡದಲ್ಲಿ ಉಪೇಂದ್ರ ಅಭಿನಯದ ‘ಅನಾಥರು’ ಅವರ ಕೊನೆಯ ಚಿತ್ರವಾಗಿತ್ತು. ವೈಯಕ್ತಿಕ ಜೀವನದ ಕಡೆಗೆ ಗಮನ ಹರಿಸಿದ್ದ ರಂಭಾ ಅವರು ಉದ್ಯಮಿ ಇಂದ್ರಕುಮಾರ್ ಪತ್ಮನಾಥನ್ ಅವರನ್ನು ವಿವಾಹವಾಗಿ ಸದ್ಯ ಮೂವರು ಮಕ್ಕಳೊಂದಿಗೆ ಕೆನಡಾದಲ್ಲಿ ನೆಲೆಸಿದ್ದಾರೆ. ತಮ್ಮ ಪತಿಗೂ ಸಿನಿಮಾದಲ್ಲಿ ಅವಕಾಶ ನೀಡಿ ಎಂದು ಕೇಳಿಕೊಂಡಿದ್ದ ಈ ನಟಿ, ಈಗ ಗ್ಲಾಮರಸ್ ಅವತಾರದಲ್ಲೇ ತೆರೆಯ ಮೇಲೆ ಕಾಣಿಸಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ.




